ಶಿವಮೊಗ್ಗ: ಈಶ್ವರಪ್ಪ ಅವರಿಗೆ 70 ವರ್ಷ ಆಗ್ತಾ ಬಂದಿದೆ. ಅವರಿಗೆ ಮರೆವಿನ ಕಾಯಿಲೆ ಆರಂಭವಾಗಿದೆ. ಅವರು ಏನು ಹೇಳುತ್ತಿದ್ದೇನೆ ಎಂಬ ಬಗ್ಗೆ ಅವರಿಗೇ ಸ್ಪಷ್ಟತೆ ಇರುವುದಿಲ್ಲ. ಹೀಗಾಗಿ ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವ ಅತ್ಯವಿಲ್ಲ. ಹೀಗೆ ಹೇಳಿದವರು ಕಾಂಗ್ರೆಸ್ ಅಥವಾ ಜೆಡಿಎಸ್ ನಾಯಕರಲ್ಲ. ಬಿಜೆಪಿ ಮಾಜಿ ಸಂಸದ ಆಯನೂರು ಮಂಜುನಾಥ್.
ರಾಜ್ಯ ಬಿಜೆಪಿಯಲ್ಲಿ ರಾಯಣ್ಣ ಬ್ರಿಗೇಡ್ ವಿಷಯ ಮುಗಿದಿದೆ. ಈಗ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ವಿವಾದ ಆರಂಭಗೊಂಡಿದೆ. ಈ ಕ್ಷೇತ್ರದ ಪ್ರಬಲ ಆಕಾಂಕ್ಷಿ ನಾನು ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದ್ದರು. ಇದೇ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಕೆ.ಎಸ್.ಈಶ್ವರಪ್ಪ ಈ ಹೇಳಿಕೆಗೆ ಪ್ರತಿಯಾಗಿ, ಹಾದಿ-ಬೀದೀಲಿ ಹೋಗೋರಿಗೆಲ್ಲಾ ಟಿಕೆಟ್ ಕೊಡೋಕೆ ಆಗೊಲ್ಲ ಎಂದಿದ್ದರು.
Advertisement
ಈ ಮಾತಿಗೆ ಇಂದು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿರುವ ಆಯನೂರು ಮಂಜುನಾಥ್, ಈಶ್ವರಪ್ಪ ಅವರ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರು ತಮ್ಮ ಹೇಳಿಕೆಗೆ ಬದ್ಧರಾಗಿ ಇರುವುದಿಲ್ಲ. ಅವರೀಗ 70ಕ್ಕೆ ಬಂದಿದಾರೆ. ಸಹಜವಾಗಿಯೇ ಅವರಿಗೆ ಮರೆವಿನ ಕಾಯಿಲೆ ಪ್ರಾರಂಭವಾಗುತ್ತಿದೆ. ತಮ್ಮ ಮಗನ ಜಿಪಂ ಚುನಾವಣೆ ಸಂದರ್ಭದಲ್ಲಿ ಅವರಿಗೆ ನನ್ನ ಪರಿಚಯ ಗೊತ್ತಿತ್ತು, ಆದರೆ ಈಗ ಮರೆತಿದ್ದಾರೆ. ತಮ್ಮ ಮಗನ ಬಳಿ ಕೇಳಿ ತಿಳಿದುಕೊಳ್ಳಲಿ ಎಂದು ವ್ಯಂಗ್ಯವಾಡಿದರು. ನಾನು ಹಾದಿ ಬೀದಿಯವನು ಎಂದಿದ್ದಾರೆ. ನನ್ನ ಮನೆಗೆ ಅವರು ಬರುವ ಪರಿಸ್ಥಿತಿ ಬಂದೇ ಬರುತ್ತದೆ. ಆಗ ನಾನು ಯಾರು ಅಂತ ಹೇಳುವೆ ಎಂದರು.
Advertisement
ಯಡಿಯೂರಪ್ಪ ಮತ್ತು ಅವರ ನಡುವಿನ ಸಂಬಂಧ ಏನೂ ಅನ್ನೋದೂ ಅವರಿಗೆ ಸ್ಪಷ್ಟವಿಲ್ಲ. ಕೆಲವೊಮ್ಮೆ ಅಣ್ಣ-ತಮ್ಮ ಅಗ್ತಾರೆ, ಕೆಲವೊಮ್ಮೆ ಕಂಸ- ಕೀಚಕ ಆಗ್ತಾರೆ, ಚಿಕ್ಕಪ್ಪ-ದೊಡ್ಡಪ್ಪ ಅಗ್ತಾರೆ. ಸದಾ ಕನ್ಫ್ಯೂಷನ್‍ನಲ್ಲಿ ಇರ್ತಾರೆ. ರಾಯಣ್ಣ ಬ್ರಿಗೇಡ್‍ನಲ್ಲಿ ಇದೀನಿ ಅಂತಾರೆ, ಇಲ್ಲಾ ಅಂತಾರೆ. ಇಂಥ ಈಶ್ವರಪ್ಪ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳವ ಅಗತ್ಯವಿಲ್ಲ. ನಾನು ಹೋರಾಟಗಳನ್ನು ಮಾಡುತ್ತಾ ಹಾದಿ-ಬೀದಿಯಲ್ಲೇ ಬೆಳೆದವನು. ಆಟೋದವರು, ಹಮಾಲರು, ಕಾರ್ಮಿಕರ ಹೋರಾಟ ಮಾಡುತ್ತಾ ಬಂದವನು. ನಾನು ಹಾದಿ-ಬೀದಿಯವನು ಎಂಬುದರಲ್ಲಿ ಯಾವುದೇ ವಿಶೇಷವಿಲ್ಲ ಎಂದರು. ಈಗಲೂ ಹೇಳುತ್ತಿದ್ದೇನೆ- ‘ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ನಾನು ಪ್ರಬಲ ಆಕಾಂಕ್ಷಿ’ ಎಂದು ಸ್ಪಷ್ಟಪಡಿಸಿದರು.