ಶಿವಮೊಗ್ಗ: ಲೋಕಸಭಾ ಉಪಚುನಾವಣೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿದ್ದರಿಂದ ಬಿವೈ ರಾಘವೇಂದ್ರ ಗೆಲುವಿನ ಅಂತರ ಕಡಿಮೆಯಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಧಿಕಾರ ಅವರದ್ದೇ ಇದ್ದ ಕಾರಣ ಭಾರೀ ಪ್ರಮಾಣದಲ್ಲಿ ಹಣ ಹಂಚಿಕೆ ಮಾಡಲಾಗಿದೆ. ಈ ಗೆಲುವು ಕಾರ್ಯಕರ್ತರ ಗೆಲುವು, ಮತದಾರರ ಗೆಲುವು, ಈ ಗೆಲುವಿನ ಮುಖಾಂತರ ನರೇಂದ್ರ ಮೋದಿ ಮುಂದೆ ಗೆಲುವು ಸಾಧಿಸಬೇಕು ಎಂದು ಬಹಳ ಅಪೇಕ್ಷೆಯಿಂದ ಶಿವಮೊಗ್ಗದ ಜನ ಬೆಂಬಲ ಕೊಟ್ಟಿದ್ದಾರೆ ಎನ್ನುವ ನಂಬಿಕೆ ಇದೆ ಎಂದು ತಿಳಿಸಿದರು.
Advertisement
Advertisement
ಈ ಐದು ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ವಿಶೇಷವಾಗಿ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಎಲ್ಲಾ ಸಚಿವರ, ಮುಖಂಡರ ದಂಡೇ ಇಲ್ಲಿಗೆ ಬಂದಿತ್ತು. ಇಲ್ಲಿಗೆ ಬಂದು ಬಿಜೆಪಿಯನ್ನು ಸೋಲಿಸಲೇಬೇಕು ಎಂಬ ಎಲ್ಲಾ ಪ್ರಯತ್ನಗಳನ್ನು ನಡೆಸಿದರು. ಹಣ ಬಲ, ಜಾತಿ, ಅಧಿಕಾರ ದುರುಪಯೋಗ ಮಾಡಿಕೊಂಡರು. ಈ ಯಾವುದೇ ಪ್ರಭಾವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಡೆಯಲಿಲ್ಲ ಎಂದರು.
Advertisement
ಕಾರ್ಯಕರ್ತರ ಪರಿಶ್ರಮ, ಮನೆಗೆ ಮನೆಗೆ ಹೋಗಿ ಅವರು ಮಾಡಿದಂತಹ ಪ್ರಯತ್ನಗಳು ಇದಕ್ಕೆ ಸಿಕ್ಕಂತಹ ಜಯವಿದು. ನರೇಂದ್ರ ಮೋದಿ ಅವರ ವಿಚಾರಕ್ಕೆ ಶಿವಮೊಗ್ಗದಲ್ಲಿ ಮೊದಲಿನಿಂದಲೂ ಬೆಂಬಲ ಕೊಡುತ್ತಿದ್ದೇವೆ. ಬಿಜೆಪಿ ವಿಧಾನ ಸಭೆ ಚುನಾವಣೆಯಲ್ಲೂ ಕೂಡಾ 8 ಕ್ಷೇತ್ರದಲ್ಲಿ 7 ಕ್ಷೇತ್ರವನ್ನು ಗೆಲ್ಲಿಸಿಕೊಟ್ಟಿದೆ. ಮುಂದೆ ಲೋಕಸಭೆಗೂ ಬೆಂಬಲವನ್ನು ನೀಡುತ್ತೇವೆ ಎನ್ನುವುದನ್ನು ಅಂದೇ ತೋರಿಸಿದ್ದಾರೆ. ಶಿವಮೊಗ್ಗದಲ್ಲಿ ಅತಿ ಹೆಚ್ಚು ಯಶಸ್ವಿಯಾಗಿ ಬಿಜೆಪಿ ಗೆಲುವು ಪಡೆದುಕೊಂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಜೆಡಿಎಸ್ ಮತ್ತು ಕಾಂಗ್ರೆಸ್‍ನ ವ್ಯಕ್ತಿಗಳು ಹಾವು ಮುಂಗುಸಿಗಳು ಅವರು ಒಟ್ಟಿಗೆ ಸೇರುವುದೇ ಅಪರೂಪ. ಈ ಒಂದು ಚುನಾವಣೆಯಲ್ಲಿ ಸರ್ಕಾರವನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎಂದು ಬಂದಿದ್ದರು. ಇನ್ನೂ ಮುಂದೆಯಾದರೂ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಸರ್ಕಾರ ಇದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಕೆಲಸಗಳನ್ನು ಮಾಡಬೇಕೆಂದು ಮನವಿ ಮಾಡಿಕೊಂಡರು.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಹಿಂದೆದೂ ಕೂಡಾ ಕಾಂಗ್ರೆಸ್, ಜೆಡಿಎಸ್ ಒಟ್ಟಾಗಿ ಇರಲಿಲ್ಲ ಮತ್ತು ಇಷ್ಟು ಹಣವನ್ನು ಖರ್ಚು ಮಾಡಿರಲಿಲ್ಲ. ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ, ಶಿವಕುಮಾರ್ ಅವರು ಒಟ್ಟಿಗೆ ಎಂದೂ ಒಂದಾಗಿರಲಿಲ್ಲ. ದೇಶಕ್ಕೆ ಒಳ್ಳೆಯದು ಮಾಡಬೇಕು ಎನ್ನುವ ಉದ್ದೇಶ ಏನು ಇಲ್ಲ. ತಮ್ಮ ಅಸ್ಥಿತ್ವವನ್ನು ಉಳಿಸಲು ಒಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv