ಲಕ್ಷ್ಮಿ ಹೆಬ್ಬಾಳ್ಕರ್ – ಜಾರಕಿಹೊಳಿ ಕಗ್ಗಂಟು ಬಿಡಿಸಲು ಕಾಂಗ್ರೆಸ್ ಹೈಕಮಾಂಡ್ ಎಂಟ್ರಿ!

Public TV
2 Min Read
BELAGAVI CONGRESS

ಬೆಂಗಳೂರು: ಬೆಳಗಾವಿ ಕೈ ನಾಯಕರ ನಡುವಿನ ಸಮರಕ್ಕೆ ಕಾರಣವಾದ ಪಿಎಲ್‍ಡಿ ಚುನಾವಣೆ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್ ಹೈಕಮಾಂಡ್ ಕಣಕ್ಕೆ ಇಳಿದಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೆಗಲಿಗೆ ಜವಾಬ್ದಾರಿ ನೀಡಿದೆ.

ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಕಾಂಗ್ರೆಸ್‍ನ ಎರಡು ಬಣಗಳ ನಡುವೆ ಪ್ರತಿಷ್ಠೆಯ ಸಮಸ್ಯೆಯಾಗಿ ಪರಿವರ್ತನೆಯಾಗಿದ್ದು, ಈ ಕುರಿತು ಮಾಹಿತಿ ಪಡೆದಿರುವ ಹೈಕಮಾಂಡ್ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನು ಬೆಳಗಾವಿಗೆ ಭೇಟಿ ನೀಡಲು ತಿಳಿಸಿದೆ. ಅಲ್ಲದೇ ಶುಕ್ರವಾರ ನಡೆಯಲಿರುವ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಸ್ವತಃ ಈಶ್ವರ್ ಖಂಡ್ರೆ ಬೆಳಗಾವಿಯಲ್ಲಿ ಇರಲಿದ್ದಾರೆ.

eshwar khandre

ಚುನಾವಣೆಯ ಬಳಿಕ ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಣಗಳ ನಡುವೆ ಈಶ್ವರ್ ಖಂಡ್ರೆ ಮಾತುಕತೆ ನಡೆಸಲಿದ್ದಾರೆ. ಇನ್ನು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಈ ಚುನಾವಣೆ ಸಮ್ಮಿಶ್ರ ಸರ್ಕಾರದ ಅಳಿವು ಉಳಿವಿನ ಮೇಲೆ ಪ್ರಭಾವ ಬೀರಲಿದೆ ಎಂದೇ ಬಿಂಬಿತವಾಗುತ್ತಿದೆ.

ಬೆಳಗಾವಿ ನಗರದ ಮಾಧವಾ ರಸ್ತೆಯಲ್ಲಿರುವ ಬೆಳಗಾವಿ ತಾಲೂಕು ಪ್ರಾಥಮಿಕ ಸಹಕಾರಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಚುನಾವಣೆಗೆ ತಾಲೂಕು ಆಡಳಿತ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಬ್ಯಾಂಕಿನ ಸದಸ್ಯರು ಬ್ಯಾಂಕ್ ಕಚೇರಿಗೆ ಆಗಮಿಸಲಿದ್ದು, ಬಳಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗೆ ನಾಮಪತ್ರ ಸಲ್ಲಿಕೆ ಆಗಲಿದೆ. ನಾಮಪತ್ರ ಸಲ್ಲಿಕೆಯಾದ 2 ಗಂಟೆ ಬಳಿಕ ಪರಿಶೀಲನೆ ನಡೆಯಲಿದ್ದು ಅಲ್ಲಿವರೆಗೂ ನಾಮಪತ್ರ ಹಿಂಪಡೆಯಲು ಕಾಲಾವಕಾಶ ನೀಡಲಾಗುತ್ತದೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಕ್ಷಮಿಸಲ್ಲ-ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ಕೆಂಡಾಮಂಡಲ!

MLA Lakshmi Hebbalkar 2 1

ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಡೆಯಲಿದ್ದು, 2 ಗಂಟೆ ಸುಮಾರಿಗೆ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಸಿಟಿವಿ ಅಳವಡಿಕೆ ಹಾಗೂ ಪೊಲೀಸರ ನಿಯೋಜನೆಯನ್ನು ಕೂಡ ಮಾಡಲಾಗಿದೆ.

ಸದ್ಯ ಇಡೀ ರಾಜ್ಯದ ಚಿತ್ತ ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಮೇಲೆ ನೆಟ್ಟಿದ್ದು, ನಾಳೆ ಮಧ್ಯಾಹ್ನ ಜಾರಕಿಹೊಳಿ ಸಹೋದರರ ಬಣಕ್ಕೆ ಜಯ ಲಭಿಸುತ್ತಾ ಅಥವಾ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವಿಜಯ ಮಾಲೆ ಸಿಗುತ್ತಾ ಎಂಬ ಕೂತುಹಲಕ್ಕೆ ತೆರೆ ಬೀಳಲಿದೆ.  ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ನ ಹದ್ದು ಬಸ್ತುನಲ್ಲಿ ಇಡದಿದ್ದರೇ, ಉಗ್ರ ಕ್ರಮ ಕೈಗೊಳ್ತೀವಿ: ರಮೇಶ್ ಜಾರಕಿಹೊಳಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *