ಬೆಂಗಳೂರು: ಅರಣ್ಯ ಪ್ರದೇಶದೊಳಗಿನ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು ತಮ್ಮ ವಾಹನದಿಂದ ಇಳಿದು ವನ್ಯಜೀವಿಯ ಫೋಟೋ ತೆಗೆಯುವುದು, ಸೆಲ್ಫಿ ತೆಗೆಯುವ ಸಾಹಸ ಮಾಡುತ್ತಿದ್ದು, ಇಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ(Eshwar Khandre) ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟಿಯ(Charmadi Ghat) ನಾಲ್ಕನೇ ತಿರುವಿನಲ್ಲಿ ಗುರುವಾರ ಬೆಳಗ್ಗೆ ಕೆಲವು ಪ್ರವಾಸಿಗರು ಆನೆಯ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಅರಣ್ಯ ಮಾರ್ಗದಲ್ಲಿ(Forest Path) ಸಂಚರಿಸುವಾಗ ವಾಹನಗಳಿಂದ ಕೆಳಗೆ ಇಳಿಯುವುದು ಅಪರಾಧವಾಗಿದ್ದು, ಆ ವಾಹನದ ನೋಂದಣಿ ಸಂಖ್ಯೆ ಪತ್ತೆ ಮಾಡಿ, ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದ್ದಾರೆ. ಇದನ್ನೂ ಓದಿ: ರನ್ಯಾರಾವ್‌ಗೆ ಪರಮೇಶ್ವರ್ ಶಿಕ್ಷಣ ಸಂಸ್ಥೆ ಸಾಲ ಕೊಟ್ಟಿರಬಹುದು: ರಾಮಲಿಂಗಾ ರೆಡ್ಡಿ
ರಾಜ್ಯ ಸರ್ಕಾರ, ಅರಣ್ಯ ಇಲಾಖೆಯು(Forest Department) ಮಾನವ ಹಾಗೂ ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಶ್ರಮಿಸುತ್ತಿದೆ. ಸಾರ್ವಜನಿಕರು ಈ ರೀತಿ ಸೆಲ್ಫಿ ತೆಗೆದುಕೊಳ್ಳುವಾಗ, ಫೋಟೋ ತೆಗೆಯುವಾಗ ಅನಾಹುತ ಸಂಭವಿಸುವ ಅಪಾಯ ಇರುತ್ತದೆ. ಯಾರೂ ತಮ್ಮ ಅಮೂಲ್ಯ ಜೀವದೊಂದಿಗೆ ಚೆಲ್ಲಾಟ ಆಡಬಾರದು ಎಂದು ಮನವಿ ಮಾಡಿದ್ದಾರೆ.