– ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ದರಾಮಯ್ಯ ಹೆಸರು ತಳಕು ಹಾಕಬಾರದು
ಬೆಂಗಳೂರು: ಯಾವುದೇ ಶಕ್ತಿ ವೀರಶೈವ-ಲಿಂಗಾಯತರನ್ನ ಬೇರ್ಪಡಿಸಲು ಸಾಧ್ಯವಿಲ್ಲ. ʻವೀರಶೈವ ಲಿಂಗಾಯತರು (Lingayats) ಹಾಳಾದ್ರೆ ಇಡೀ ರಾಜ್ಯವೇ ಹಾಳಾಗುತ್ತೆ, ಅವರು ಸುಧಾರಿಸಿದ್ರೆ, ಕರ್ನಾಟಕ ಉದ್ಧಾರ ಆಗುತ್ತೆʼ ಅಂತ ಸಾಹಿತಿಯೊಬ್ಬರು ಹೇಳ್ತಾರೆ. ಹಾಗಾಗಿ ಎಲ್ಲರ ಉದ್ಧಾರ ಆಗಬೇಕಾದ್ರೆ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿರುವುದು ಅತ್ಯವಶ್ಯಕವಾಗಿದೆ. ಯಾರಾದ್ರೂ ಈ ಧರ್ಮವನ್ನ ಹಾಳು ಮಾಡಲು ಪ್ರಯತ್ನಿಸಿದ್ರೆ, ಇಡೀ ಕರ್ನಾಟಕವೇ ಹಾಳಾಗುತ್ತೆ ಎಂದು ಸಚಿವ ಈಶ್ವರ್ ಖಂಡ್ರೆ (Eshwar Khandre) ಹೇಳಿದ್ದಾರೆ.
ʻಪಬ್ಲಿಕ್ ಟಿವಿʼ ಜೊತೆಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕು ಎಂಬ ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿಕೆಗೆ ಪ್ರತಕ್ರಿಯಿಸಿದ್ದಾರೆ. ಎಂ.ಬಿ.ಪಾಟೀಲ್ ನನಗೆ ಸ್ನೇಹಿತರು ಅವರ ಬಗ್ಗೆ ಮಾತನಾಡಲ್ಲ. ಯಾರಿಂದಲೂ ವೀರಶೈವ ಲಿಂಗಾಯತ (Veerashaiva Lingayat) ಬೇರೆ ಮಾಡಲು ಸಾಧ್ಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದಲೇ ಇದೀವಿ. ಅಲ್ಲದೇ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ದರಾಮಯ್ಯ ಹೆಸರನ್ನ ತಳಕು ಹಾಕಬಾರದು. ಈ ಹಿಂದೆಯೂ ಅವರಿಗೆ ಸಂಬಂಧ ಇರಲಿಲ್ಲ, ಈಗಲೂ ಇಲ್ಲ, ನಮ್ಮ ಸರ್ಕಾರಕ್ಕೂ ಇಲ್ಲ. ವೀರಶೈವ ಲಿಂಗಾಯತ ಮಹಾಸಭಾ ನಿರ್ಣಯವೇ ಅಂತಿಮ ಎಂದು ಹೇಳಿದ್ದಾರೆ.
ನಮ್ಮ ನಿಲುವು ಸ್ಪಷ್ಟವಾಗಿ ಹೇಳಿದ್ದೇನೆ. ಲಿಂಗಾಯತ-ವೀರಶೈವ ಎರಡೂ ಒಂದೇ. ಶಿವಕುಮಾರ ಸ್ವಾಮಿಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಸಭೆಯ ಎಲ್ಲಾ ಅಧ್ಯಕ್ಷರು ಇವತ್ತು ವೀರಶೈವ-ಲಿಂಗಾಯತ ಎರಡು ಸಮಾನಾರ್ಥಕ ಪದಗಳು ಇವೆ ಅಂತ ಹೇಳಿದ್ದಾರೆ. ವೀರಶೈವ-ಲಿಂಗಾಯತ ಭಿನ್ನ ಇಲ್ಲ ಎಂದಿದ್ದಾರೆ.
ಇಷ್ಟ ಲಿಂಗ ಪೂಜೆ ಮಾಡುವವರು, ಅಷ್ಟಾಚರಣ ವ್ಯವಸ್ಥೆ ಪಾಲನೆ ಮಾಡುವರು, ಗುರುಗಳು ಇದ್ದಾರೆ, ವಿರಕ್ತರು ಇದ್ದಾರೆ. ಹೀಗಾಗಿ ಎಲ್ಲರು ಒಗ್ಗಟ್ಟಾಗಿ, ಸಂಘಟಿತರಾಗಿ ಇರಬೇಕು. ಸಂಘಟನೆಯಲ್ಲಿ ಶಕ್ತಿ ಇದೆ. ವಿಘಟನೆಯಲ್ಲಿ ಯಾವುದೇ ಉಪಯೋಗ ಆಗೊಲ್ಲ ಎಂಬುದು ನಮ್ಮ ನಿಲುವು. ಆ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮದಲ್ಲಿ (Lingayat Religion) ಮಹಾಸಭಾದ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಹಾಸಭಾ ಇವತ್ತು ಅಲ್ಲ ಸ್ವಾತಂತ್ರ‍್ಯ ಪೂರ್ವದಿಂದ ಹಿಡಿದು 2,000 ಇಸವಿಯಿಂದ ನಡೆದ ಜನಗಣತಿ ಸಮಯದಲ್ಲಿ ಎಲ್ಲರ ಅಭಿಪ್ರಾಯ ತೆಗೆದುಕೊಳ್ಳಾಗಿದೆ. ಭೌಗೋಳಿಕವಾಗಿ ನಾವೆಲ್ಲರೂ ಹಿಂದೂಗಳೇ ಆದರೂ ನಮ್ಮ ಆಚಾರ-ವಿಚಾರದಲ್ಲಿ ಸಿಖ್, ಜೈನರು, ಬೌದ್ಧ, ಪಾರ್ಸಿ ಗಳಿಗೆ ಪ್ರತ್ಯೇಕ ಧರ್ಮ ಅಂತ ಕೊಡಲಾಗಿದೆ. ಅದೇ ಆಧಾರದಲ್ಲಿ ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ನೀಡಬೇಕು ಅಂತ ಪದೇ ಪದೇ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಜನಗಣತಿಯಲ್ಲೂ ಪ್ರತ್ಯೇಕ ಕಾಲಂ ಕೊಡಬೇಕು ಅಂತ ವಿನಂತಿ ಮಾಡಿದ್ದೇವೆ. ಇಲ್ಲಿವರೆಗೂ ಸರ್ಕಾರ ಅದನ್ನ ಗುರುತಿಸಿಲ್ಲ. ನಮ್ಮ ಮಹಾಸಭೆಯ ವತಿಯಿಂದ ಇನ್ನು ಮುಂದೆಯೂ ಪ್ರತ್ಯೇಕ ಧರ್ಮ ಮಾನ್ಯತೆ ಸಿಗಲು ಪ್ರಯತ್ನ ಮಾಡ್ತೀವಿ ಅಂತ ಸ್ಪಷ್ಟಪಡಿಸಿದ್ದಾರೆ.
ಪ್ರತ್ಯೇಕ ಧರ್ಮದ ವಿಚಾರ ಮತ್ತು ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ. ಸಿದ್ದರಾಮಯ್ಯ ಜನಸಮುದಾಯದ ನಾಯಕರು ಇದ್ದಾರೆ. ನಾವು ಯಾರಾದ್ರು ಪ್ರತ್ಯೇಕ ಧರ್ಮದ ಬಗ್ಗೆ ಅವರ ಬಳಿ ಮಾತಾಡಿದ್ರೆ ಸಿಎಂ ನಿರ್ಧಾರ ತೆಗೆದುಕೊಳ್ತಾರೆ. ಮೊದಲು ಕೂಡಾ ನೀವೆಲ್ಲರು ಬಂದು ಏನ್ ಹೇಳ್ತಿರೋ ಅದನ್ನ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇನೆ ಅಂತ ಹೇಳಿದ್ರು. ವಿನಾಃ ಕಾರಣ ರಾಜಕೀಯ ದುರುದ್ದೇಶದಿಂದ ಸಿದ್ದರಾಮಯ್ಯ ಅವರ ಬಗ್ಗೆ ಮಾತಾಡೋದು ಸರಿಯಲ್ಲ ಅಂತ ತಿಳಿಸಿದ್ದಾರೆ.