ಉಡುಪಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಕಣ್ಮರೆಯಾಗಿದ್ದ ಆರೋಪಿಯನ್ನು ಸಾರ್ವಜನಿಕರ ಸಹಕಾರದಿಂದ ಬಂಧಿಸುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ.
ಬಾದಾಮಿ ತಾಲೂಕಿನ ಹನುಮಂತ ಬಸಪ್ಪಕಂಬಳಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಜಿಲ್ಲೆಯ ಮೂಡುಸಗ್ರಿ ಗ್ರಾಮದ ಬಾಲಕಿಯನ್ನು ಅತ್ಯಾಚಾರವೆಸೆಗಿ, ಕೊಲೆ ಮಾಡಿದ್ದ ಪ್ರಕರಣದಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದರು. ಒಂದು ದಿನದ ಹಿಂದೆ ಪೊಲೀಸರು ಆರೋಪಿಯನ್ನು ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಿವಾಸದ ಮುಂದೆ ಹಾಜರುಪಡಿಸಿದ್ದರು.
ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ಹುನುಮಂತನನ್ನು ಮಣಿಪಾಲ ಪೊಲೀಸರು ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ದಾರಿ ಮಧ್ಯೆ ಆರೋಪಿ ಪೊಲೀಸ್ ವಾಹನದಿಂದ ತಪ್ಪಿಸಿಕೊಂಡು ಕಾಡಿನಲ್ಲಿ ಕಣ್ಮರೆಯಾಗಿದ್ದನು.
ಬಳಿಕ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾಗ ಪೆರ್ಣಂಕಿಲದ ಹೊಟೇಲೊಂದರಲ್ಲಿ ಚಾಹ ಕುಡಿದು ಹೋಗಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಅಲ್ಲಿಯೇ ಹುಡುಕಾಟ ಮುಂದುವರಿಸಿದ್ದಾರೆ. ಆಗ ಕಾಡಿನಲ್ಲಿ ಸಂಜೆ ವೇಳೆ ಹನುಮಂತ ಪತ್ತೆಯಾಗಿದ್ದು, ಮತ್ತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.