– ಡಿಸಿಎಂ ಆಸೆ ಹೊಂದಿರುವ ಅನರ್ಹ ಶಾಸಕರಿಗೆ ಈಶ್ವರಪ್ಪ ಟಾಂಗ್
ಬೆಂಗಳೂರು: ರಾಜ್ಯದಲ್ಲಿ ನಡೆದ 15 ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಡಿ.9 ರಂದು ಪ್ರಕಟವಾಗಲಿದ್ದು, ಆ ಬಳಿಕ ರಾಜ್ಯದಲ್ಲಿರುವ ಅತಂತ್ರ ರಾಜಕಾರಣ ಪರಿಸ್ಥಿತಿ ದೂರವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಮೂರುವರೇ ವರ್ಷ ಬಿಜೆಪಿ ಸರ್ಕಾರ ಇರುತ್ತೆ. ಇದು ಜನರ ಅಭಿಪ್ರಾಯ ಕೂಡ ಆಗಿತ್ತು. ಅದೇ ರೀತಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಲಿದೆ. ಉಪಚುನಾವಣೆಯ ನಡೆದ 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಅನರ್ಹರ ಶಾಸಕರು ರಾಜೀನಾಮೆ ಕೊಡಲಿಲ್ಲ ಎಂದಿದ್ದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಅವರ ಋಣ ತೀರಿಸಬೇಕಾಗಿದ್ದು, ಯಾವುದೇ ಕಾರಣಕ್ಕೂ ಅವರಿಗೆ ನಾವು ಅನ್ಯಾಯ ಮಾಡುವುದಿಲ್ಲ. ಗೆದ್ದ ಎಲ್ಲರನ್ನು ಮಂತ್ರಿ ಮಾಡುತ್ತೇವೆ. ಆದರೆ ಸೋತವರಿಗೆ ಏನು ಇಲ್ಲ. ಈಗಾಗಲೇ ಈ ಬಗ್ಗೆ ಶಾಸಕರೊಂದಿಗೆ ಮಾತನಾಡಿದ್ದು, ಎಂಎಲ್‍ಸಿ ಮಾಡಿ ಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದೇವು. ಆದರೆ ಅವರು ಚುನಾವಣೆ ಎದುರಿಸಿ ಮಂತ್ರಿಯಾಗುತ್ತೇವೆ ಎಂದರು. ಹೀಗಾಗಿ ಗೆದ್ದರೆ ಮಾತ್ರ ಅವರನ್ನು ಮಂತ್ರಿ ಮಾಡುತ್ತೇವೆ ಎಂದರು.
Advertisement
ಬೆಳಗಾವಿಯ ಎಲ್ಲಾ ಅನರ್ಹರನ್ನು ಮಂತ್ರಿ ಮಾಡುತ್ತೇವೆ. ಈಗಾಗಲೇ ಲಕ್ಷ್ಮಣ್ ಸವದಿ ಅವರ ವಿಚಾರ ಸ್ಪಷ್ಟವಾಗಿದ್ದು, ಅವರು ಡಿಸಿಎಂ ಆಗಿಯೇ ಮುಂದುವರಿಯುತ್ತಾರೆ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್ ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
Advertisement
ಇದೇ ವೇಳೆ ಅನರ್ಹ ಶಾಸಕರನ್ನು ಡಿಸಿಎಂ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಿಸಿಎಂ ಆಗಲು ರಾಜಕಾರಣದಲ್ಲಿ ಯಾರಿಗೆ ಇಷ್ಟ ಇರಲ್ಲ ಹೇಳಿ? ವಯಸ್ಸಿಗೆ ಬಂದಂತವರು ಇದ್ದಕ್ಕಿದ್ದಂತೆ ಐಶ್ವರ್ಯ ರೈ ಬೇಕು ಎಂದು ಕೇಳುತ್ತಾರೆ. ಆದರೆ ಐಶ್ವರ್ಯ ರೈ ಇರುವುದು ಒಬ್ಬರೇ ತಾನೇ. ಇದರಂತೆ ಡಿಸಿಎಂ ಸ್ಥಾನಕ್ಕೆ ಹಲವರು ಅಪೇಕ್ಷೆ ಪಡುತ್ತಾರೆ, ಆದರೆ ಅವರಿಗೆ ಅವಕಾಶ ಆಗಬೇಕಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅನರ್ಹರಿಗೆ ಏನೇನು ಹುದ್ದೆ ಕೊಡುತ್ತಾರೆ ನನಗೆ ಗೊತ್ತಿಲ್ಲ. ಅದನ್ನು ಸಿಎಂ ಬಿಎಸ್‍ವೈ ತೀರ್ಮಾನ ಮಾಡುತ್ತಾರೆ ಎಂದು ಡಿಸಿಎಂ ಕನಸ್ಸು ಕಾಣುತ್ತಿರುವ ಗೋಕಾಕ್ ಸಾಹುಕಾರ ಹಾಗೂ ಹಳ್ಳಿ ಹಕ್ಕಿ ವಿಶ್ವನಾಥ್ ಅವರಿಗೆ ಈಶ್ವರಪ್ಪ ಅವರು ಪರೋಕ್ಷ ಟಾಂಗ್ ನೀಡಿದರು.
ಇದೇ ವೇಳೆ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಕೈಗೊಂಡ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಸಚಿವರು, ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ವಿಶೇಷವಾದ ಯೋಜನೆ ರೂಪಿಸಲಾಗಿದೆ. ಪ್ರತಿ ಪಂಚಾಯಿತಿಗೂ ಈಗಾಗಲೇ ಕೇಂದ್ರ ಸರ್ಕಾರದಿಂದ 20 ಲಕ್ಷ ಬಿಡುಗಡೆ ಮಾಡಿದ್ದಾರೆ. 6,021 ಗ್ರಾಮ ಪಂಚಾಯತಿಗಳಲ್ಲಿ ಈ ಯೋಜನೆ ಜಾರಿಗೆ ತಂದು, ಕಸ ಇಲ್ಲದೆ ರೀತಿ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು. ಅಲ್ಲದೇ ಮತ್ತೊಂದು ಯೋಜನೆ ಮೂಳಕ ಗ್ರಾಮ ಪಂಚಾಯತಿ ಕಟ್ಟಡಗಳಿಗೆ ಸೋಲಾರ್ ಅಳವಡಿಕೆ ಕಾರ್ಯಕ್ಕೆ ಒತ್ತು ನೀಡುತ್ತಿದ್ದೇವೆ ಎಂದು ವಿವರಿಸಿದರು.