ಬೆಂಗಳೂರು: ಭಾರತದ ಹೆಸರಾಂತ ಪರಿಸರ ತಜ್ಞ, ಪರಿಸರ ವಿಜ್ಞಾನ ಕೇಂದ್ರದ ಸಂಸ್ಥಾಪಕ ಹಾಗೂ ಪಶ್ಚಿಮಘಟ್ಟ ಪರಿಸರ ಅಧ್ಯಯನದ ತಜ್ಞರ ಸಮಿತಿ (ಗಾಡ್ಗೀಳ್ ಆಯೋಗ) ಅಧ್ಯಕ್ಷರಾಗಿದ್ದ ಮಾಧವ ಗಾಡ್ಗೀಳ್ (Madhav Gadgil) ಅವರ ನಿಧನಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ತೀವ್ರ ಸಂತಾಪ ವ್ಯಕ್ತಪಡಿಸಿದರು.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಮಾಧವ ಗಾಡ್ಗೀಳ್ ಅವರ ನಿಧನ ಸುದ್ದಿ ತಿಳಿದು ಅತೀವ ದುಃಖವಾಯಿತು. ಪರಿಸರ ಸಂರಕ್ಷಣೆಗೆ ಮತ್ತು ಜೀವವೈವಿಧ್ಯತೆಯ ವಿಶ್ವದ ಅದ್ಭುತ ತಾಣಗಳಲ್ಲಿ ಒಂದಾದ ಪಶ್ಚಿಮಘಟ್ಟದ ಉಳಿವಿಗೆ ಮತ್ತು ಸಂರಕ್ಷಣೆಗೆ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದ ಗಾಡ್ಗೀಳ್ ಅವರು ತಮ್ಮ 83ನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದು, ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ. ಇದನ್ನೂ ಓದಿ: ಖ್ಯಾತ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ ನಿಧನ
ಹಲವು ನದಿಗಳ ಮೂಲ, ಆಮ್ಲಜನಕದ ಕಣಜ ಹಾಗೂ ಮುಂಗಾರು ಮಾರುತಗಳನ್ನು ತಡೆದು ದೇಶವ್ಯಾಪಿ ಮಳೆಯಾಗಲು ಸಹಕಾರಿಯಾಗಿರುವ ಪಶ್ಚಿಮಘಟ್ಟಗಳ ಗಿರಿ ಪ್ರದೇಶಗಳು ಗಣಿಗಾರಿಕೆ ಹಾಗೂ ಮಾಲಿನ್ಯ ಕಾರಕ ಕೈಗಾರಿಕೆಗಳಿಂದ ಕ್ರಮೇಣ ನಾಶವಾಗುತ್ತಿರುವ ಬಗ್ಗೆ ಸದಾ ತಮ್ಮ ಕಳವಳ ವ್ಯಕ್ತಪಡಿಸುತ್ತಿದ್ದ ಗಾಡ್ಗೀಳ್ ಅವರು ಸಲ್ಲಿಸಿರುವ ವರದಿಯಲ್ಲಿರುವ ಅಂಶಗಳು ಪ್ರಕೃತಿ ಪರಿಸರ ಸಂರಕ್ಷಣೆಗೆ ಭಾರತಕ್ಕೆ ಮಾರ್ಗದರ್ಶಿಸೂತ್ರಗಳಾಗಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದ ಮೇಲೆ 500% ಸುಂಕ? – ಮಸೂದೆಗೆ ಟ್ರಂಪ್ ಒಪ್ಪಿಗೆ


