ಬಳ್ಳಾರಿ: ಭಾರೀ ಪ್ರಮಾಣದಲ್ಲಿ ಹೊಗೆ ಹೊರಸೂಸುವುದು ಹಾಗೂ ಧೂಳಿನಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿತ್ತು. ಹೀಗಾಗಿ ಹೆಚ್ಚು ದೂರು ಕೇಳಿ ಬರುತ್ತಿದ್ದವು. ಈ ಹಿನ್ನೆಲೆ ಎರಡು ಸ್ಪಾಂಜ್ ಐರನ್ ಫ್ಯಾಕ್ಟರಿಗಳಿಗೆ ಬೀಗ ಜಡಿಯಲಾಯಿತು.
ಜಿಲ್ಲೆಯ ಸಂಡೂರು ತಾಲೂಕಿನ ಸುಲ್ತಾನಪುರ ಗ್ರಾಮದ ಬಳಿಯಿರುವ ಪದ್ಮಾವತಿ ಸ್ಪಾಂಜ್ ಐರನ್ ಮತ್ತು ಜೆಎಸ್ ಡಬ್ಲ್ಯು ಪ್ರಾಜೆಕ್ಟ್ ಫ್ಯಾಕ್ಟರಿಗಳಿಗೆ ಬೀಗ ಜಡಿಯಲಾಗಿದೆ. ಸುಲ್ತಾನಪುರ ಗ್ರಾಮದ ಯುವಕ ಕೆ.ಎಸ್.ಜಂಬಯ್ಯ ನೀಡಿದ್ದ ದೂರಿನ ಮೇರೆಗೆ ಸಂಡೂರು ತಹಶೀಲ್ದಾರ್ ಹೆಚ್.ಜೆ.ರಶ್ಮಿ ನೇತೃತ್ವದ ತಂಡ ಬೀಗ ಜಡಿದಿದೆ. ಸೋಮವಾರ ಫ್ಯಾಕ್ಟರಿಗಳಿಗೆ ತೆರಳಿ ತಹಶೀಲ್ದಾರ್ ತಂಡ ಪರಿಶೀಲನೆ ನಡೆಸಿದ್ದು, ಈ ವೇಳೆ ಫ್ಯಾಕ್ಟರಿಗಳಿಂದ ಪರಿಸರ ಮಾಲಿನ್ಯ ಉಂಟಾಗುವುದು ತಿಳಿದಿದೆ. ಈ ಹಿನ್ನೆಲೆ ಎರಡೂ ಫ್ಯಾಕ್ಟರಿಗಳಿಗೆ ಬೀಗಮುದ್ರೆ ಜಡಿದಿದ್ದಾರೆ.
Advertisement
Advertisement
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಸೂಚನೆಯ ಮೇರೆಗೆ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಹಾಗೂ ಸಂಡೂರು ತಹಶೀಲ್ದಾರ್ ರಶ್ಮಿ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಫ್ಯಾಕ್ಟರಿಗಳನ್ನು ಸೀಜ್ ಮಾಡಿರುವುದಕ್ಕೆ ಸುತ್ತ ಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಮಾಲಿನ್ಯಕಾರಕ ಕಾರ್ಖಾನೆಗಳನ್ನು ಮುಚ್ಚಿಸಿರುವ ರಾಜ್ಯ ಸರ್ಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮ ನನಗೂ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಸಂತಸ ತಂದಿದೆ. ಭವಿಷ್ಯದಲ್ಲಿ ಸರ್ಕಾರ ಮಾಲಿನ್ಯಕಾರಕ ಕಾರ್ಖಾನೆಗಳನ್ನು ತೆರೆಯಲು ಅವಕಾಶ ಕೊಡಬಾರದು. ಇಂತಹ ಕಾರ್ಖಾನೆಗಳಿಂದ ಈಗಾಗಲೇ ಪರಿಸರ, ರೈತರ ಬೆಳೆಗಳು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ. ಈ ಬಗ್ಗೆ ಕೂಡಲೇ ತಜ್ಞರ ತಂಡ ರಚಿಸಿ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ ಹಾಳಾಗಿರುವ ಪರಿಸರವನ್ನು ಮರು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸುಲ್ತಾನಪುರ ಗ್ರಾಮದ ಜನ ಆಗ್ರಹಿಸಿದ್ದಾರೆ.