ಬೆಂಗಳೂರು: ಪುರುಷರಿಗೆ ಮೀಸಲಿರುವ ಸೀಟ್‌ನಲ್ಲಿ ಪುರುಷರೇ ಕುಳಿತುಕೊಳ್ಳುವಂತೆ ನೋಡಿಕೊಳ್ಳಿ ಎಂದು ತನ್ನ ಸಿಬ್ಬಂದಿಗೆ ಕೆಎಸ್‌ಆರ್‌ಟಿಸಿ (KSRTC) ಮೈಸೂರು ಘಟಕ ಸೂಚನೆ ನೀಡಿದೆ.
ಶಕ್ತಿ ಯೋಜನೆ (Shakti Scheme) ಜಾರಿಯಾದ ಬಳಿಕ ರಾಜ್ಯದ ಸರ್ಕಾರಿ ಬಸ್ಸುಗಳು ಮಹಿಳಾ ಬಸ್ಸುಗಳಾಗಿ ಬದಲಾಗಿದೆ. ಉಚಿತ ಪ್ರಯಾಣ ಘೋಷಣೆಯಾದ ದಿನದಿಂದ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನಮಗೆ ಸೀಟು ಸಿಗುತ್ತಿಲ್ಲ ಎಂದು ಪುರುಷರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೊದಲೇ ಬಸ್ಸುಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ದುಡ್ಡು ಕೊಟ್ಟು ಟಿಕೆಟ್ ಪಡೆದರೂ ನಮಗೆ ಸೀಟು ಸಿಗುತ್ತಿಲ್ಲ. 60-70 ಕಿ.ಮೀ ದೂರ ಪ್ರಯಾಣವನ್ನು ನಿಂತುಕೊಂಡೇ ಮಾಡುವ ಪರಿಸ್ಥಿತಿ ಹಲವು ಭಾಗಗಳಲ್ಲಿ ನಿರ್ಮಾಣವಾಗಿದೆ ಎಂದು ಪುರುಷರು ಸಿಟ್ಟು ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಗಂಗೂಲಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ- ಪ್ರಾಣಾಪಾಯದಿಂದ ಪಾರು
ಬಸ್ಸಿನಲ್ಲಿ ನಿಂತುಕೊಂಡೇ ಪ್ರಯಾಣಿಸಿ ರೋಸಿಹೋದ ಮೈಸೂರು ನಿವಾಸಿ ವಿಷ್ಣುವರ್ಧನ್ ಪುರುಷರಿಗೂ ಸೀಟ್ ಕೊಡಿ ಎಂದು ಕೆಎಸ್‌ಆರ್‌ಟಿಸಿ ಮೈಸೂರು ಘಟಕಕ್ಕೆ ದೂರು ಕೊಟ್ಟಿದ್ದಾರೆ. ಮೈಸೂರು ನಗರ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಬಹುತೇಕ ಮಹಿಳೆಯರೇ ಕುಳಿತುಕೊಂಡಿರುತ್ತಾರೆ. ನಮಗೆ ಸೀಟು ಸಿಗುತ್ತಿಲ್ಲ. ಹೀಗಾಗಿ ನಮಗೂ ಕುಳಿತುಕೊಳ್ಳಲು ಸೀಟು ಕೊಡಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಮೈಸೂರು ಘಟಕದಿಂದ ಕಾರ್ಯಾಚರಣೆಗೊಳ್ಳುವ ಎಲ್ಲಾ ಬಸ್‌ಗಳಲ್ಲಿಯೂ ಪುರುಷರಿಗೆ ಮೀಸಲಿರುವ ಸೀಟ್‌ನಲ್ಲಿ ಪುರುಷರೇ ಕುಳಿತುಕೊಳ್ಳುವಂತೆ ನೋಡಿಕೊಳ್ಳಿ ಅಂತ ಆಯಾ ಘಟಕಗಳ ನಿಯಂತ್ರಣಾಧಿಕಾರಿಗಳು ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ತಮ್ಮ ಸಿಬ್ಬಂದಿಗೆ ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗದ ನಿಯಂತ್ರಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕೇವಲ ಮಹಿಳಾ ಸೀಟ್‌ಗಳು ಅಂತಾ ಬರೆದಿರುತ್ತಾರೆ. ಪುರುಷರ ಸೀಟ್ ಎಂದು ಎಲ್ಲೂ ಬರೆದಿಲ್ಲ. ಪುರುಷರ ಸೀಟು ಎಲ್ಲಿದೆ ಎನ್ನುವುದರ ಬಗ್ಗೆ ಕೆಎಸ್‌ಆರ್‌ಟಿಸಿ ಸರಿಯಾದ ಸ್ಪಷ್ಟನೆ ನೀಡಬೇಕಿದೆ. ಶಕ್ತಿ ಯೋಜನೆ ಜಾರಿಯಾದ ನಂತರ ಸರ್ಕಾರ ಒಂದು ಷರತ್ತು ವಿಧಿಸಿದೆ. ಬಸ್‌ಗಳಲ್ಲಿ ಶೇ.50 ರಷ್ಟು ಆಸನ ಪುರುಷರಿಗೆ ಮೀಸಲು ಎಂದು ತಿಳಿಸಲಾಗಿದೆ. ಹೀಗಾಗಿಯೇ ಎಲ್ಲಾ ಬಸ್‌ಗಳಲ್ಲಿಯೂ ಅರ್ಧದಷ್ಟು ಆಸನಗಳಲ್ಲಿ ಪುರುಷರಿಗೆ ಮೀಸಲು ಇಡಬೇಕಾಗುತ್ತದೆ. ಆದರೆ ಈ ಷರತ್ತಿನ ಪಾಲನೆ ಮಾತ್ರ ಸರಿಯಾಗಿ ಆಗುತ್ತಿಲ್ಲ.
ಪುರುಷರಿಗೆ ಸೀಟುಗಳು ಎಂದು ಬೋರ್ಡ್ ಹಾಕಿದ್ದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಬೇರೆ ಸೀಟಿನಲ್ಲಿ ಕುಳಿತ ಮಹಿಳೆಯರನ್ನು ಏಳಿಸಿದರೆ ನಮ್ಮನ್ನು ಯಾಕೆ ಏಳಿಸುತ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ ಮತ್ತು ಇದರಿಂದ ಗಲಾಟೆ ಆಗುತ್ತದೆ.