ನವದೆಹಲಿ: ತನ್ನನ್ನು ಬಿಟ್ಟು ಇನ್ನೊಬ್ಬನ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡ ಯುವತಿಯ ಮೇಲೆ ಹಲ್ಲೆ ಮಾಡಿದ ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೆಹಲಿಯ ಗಾಜಿಯಾಬಾದ್‍ನಲ್ಲಿ ನಡೆದಿದೆ. ತಲೆಗೆ ಬಲವಾದ ಏಟು ಬಿದ್ದು ಗಾಯಗೊಂಡ 22 ವರ್ಷದ ಯುವತಿಯನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆತ್ಮಹತ್ಯೆಗೀಡಾದ ಯುವಕ, ಯುವತಿಯನ್ನು ಮದುವೆಯಾಗಲು ಬಯಸಿದ್ದ. ಇವರಿಬ್ಬರೂ ಗಾಜಿಯಾಬಾದ್‍ನ ಲೋನಿ ಪ್ರದೇಶದವರು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಸೋಮವಾರ ಬೆಳಗ್ಗೆ 7.30ರ ಸಮಯದಲ್ಲಿ ಯುವತಿ ಕೆಲಸಕ್ಕೆ ಹೊರಟಿದ್ದಾಗ ದೆಹಲಿಯ ಮೀತ್ ನಗರ್ ಎಂಬಲ್ಲಿ ಹಲ್ಲೆ ನಡೆದಿದೆ. ಬಳಿಕ ಯುವಕ ತನ್ನ ಮನೆಗೆ ಬಂದು ಮನೆಯಲ್ಲಿದ್ದ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಸ್ಥಳದಲ್ಲಿ ಯಾವುದೇ ಡೆತ್‍ನೋಟ್ ಸಿಕ್ಕಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನ್ಯಾಯ ಸಿಗಲಿಲ್ಲವೆಂದು ಪೊಲೀಸ್ ಠಾಣೆ ಮುಂದೆಯೇ ಬೆಂಕಿ ಹಚ್ಚಿಕೊಂಡಳು!
ದೆಹಲಿಯ ಜ್ಯೋತಿ ನಗರ್ ಪೊಲೀಸ್ ಠಾಣೆಯಲ್ಲಿ ಹತ್ಯೆ ಯತ್ನದ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿದಿದೆ ಎಂದು ಡಿಸಿಪಿ ಸಂಜಯ್ ಕುಮಾರ್ ಸೈನ್ ಹೇಳಿದ್ದಾರೆ. ಹಲ್ಲೆ ನಡೆದ ಬಳಿಕ ಆರೋಪಿ ಗಾಜಿಯಾಬಾದ್‍ನ ಲೋನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಯುವತಿಯ ನಿಶ್ಚಿತಾರ್ಥ ದೀಪಕ್ ಜೊತೆ ನಡೆದಿತ್ತು. ಇದರಿಂದ ನೊಂದಿದ್ದ ಯುವಕ, ತನ್ನ ಪುತ್ರಿಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಯುವತಿಯ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 1,200 ವರ್ಷದಷ್ಟು ಹಳೆಯ ಮಕ್ಕಳ, ವಯಸ್ಕರ ಅವಶೇಷ ಪತ್ತೆ!
ಯುವತಿ ಗುರು ತೇಜ್ ಬಹಾದುರ್ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪತ್ಪರ್‌ಗಂಜ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.