ಯಾದಗಿರಿ: ಉದ್ರಿ ಭಾಷಣ ಮಾಡಬೇಡಿ, ಮೊದಲು ಕೆಲಸ ಮಾಡಿ ಅಂತಾ ಮಾಜಿ ಸಚಿವ ಬಾಬು ರಾವ್ ಚಿಂಚನಸೂರ್ ಅವರಿಗೆ ಕ್ಷೇತ್ರದ ಜನರು ವೇದಿಕೆಯ ಮೇಲೆಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಬಳಿಯ ನಸಲವಾಯಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆಗಾಗಿ ಸಚಿವರು ತೆರಳಿದ್ದರು. ಕಾರ್ಯಕ್ರಮದಲ್ಲಿ ಸಚಿವರು ಭಾಷಣ ಮಾಡಲು ಮುಂದಾಗುತ್ತಿದ್ದಂತೆ ಸ್ಥಳೀಯರು ಆಕ್ರೋಶಗೊಂಡು ಸಚಿವರ ವಿರುದ್ಧ ಹರಿಹಾಯ್ದರು.
ಈ ಹಿಂದೆ ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಎಚ್‍ಕೆಆರ್‍ಡಿಬಿಯಿಂದ ಬಂದ 15 ಕೋಟಿ ರೂಪಾಯಿ ಹಣವನ್ನು ನುಂಗಿದ್ದೀರಿ ಎಂದು ಜನರು ಆರೋಪಿಸಿದರು. ಅಪರೂಪಕ್ಕೆ ಎಂಬಂತೆ ಕ್ಷೇತ್ರಕ್ಕೆ ಬರುವ ನೀವು ಉದ್ರಿ ಭಾಷಣ ಮಾಡಿ ಹೋಗಬೇಡಿ, ಕೆಲಸ ಮಾಡಿ ಅಂತಾ ಜನರು ಆಕ್ರೋಶಗೊಂಡರು. ಮಾಜಿ ಸಚಿವರಿಗೆ ಜನ ತರಾಟೆ ತೆಗೆದುಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಾಬುರಾವ್ ಚಿಂಚನಸೂರ್ ಎರಡು ಬಾರಿ ಕಾಂಗ್ರೆಸ್ ನಿಂದ ಗೆದ್ದು ಬಂದಿದ್ದಾರೆ. ಈ ಬಾರಿಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಚಿಂಚನಸೂರ್ ಅವರಿಗೆ ತಮ್ಮ ಕ್ಷೇತ್ರದಲ್ಲಾದ ಘಟಯಿಂದಾಗಿ ತೀವ್ರ ಮುಜುಗರಕ್ಕೊಳಗಾಗಿದ್ದಾರೆ. ಗುರುಮಿಠಕಲ್ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ.