ಪುಣೆ: ವರುಣ್ ಚಕ್ರವರ್ತಿ (Varun Chakravarthy) ಸ್ಪಿನ್ ಕೈಚಳಕ ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ಹೊಡಿ ಬಡಿ ಹೋರಾಟದ ಹೊರತಾಗಿಯೂ ಇಂಗ್ಲೆಂಡ್ ತಂಡವು ಟೀಂ ಇಂಡಿಯಾ ವಿರುದ್ಧ 26 ರನ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 1-2 ಹಿನ್ನಡೆ ಕಾಯ್ದುಕೊಂಡಿದ್ದು, ಸರಣಿ ಹೋರಾಟ ಜೀವಂತವಾಗಿರಿಸಿದೆ.
ಇಲ್ಲಿನ ಸೌರಾಷ್ಟ್ರ ಕ್ರೀಡಾಂಗಣದಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ (England Team) 9 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿತ್ತು. ಗೆಲುವಿಗೆ 172 ರನ್‌ಗಳ ಸವಾಲಿನ ಗುರಿ ಪಡೆದ ಭಾರತ (Team India) 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಪಾಂಡ್ಯ ಹೋರಾಟ ವ್ಯರ್ಥ:
ಸವಾಲಿನ ಮೊತ್ತ ಗುರಿ ಬೆನ್ನಟ್ಟಿದ ಭಾರತ ಅಲ್ಪ ಮೊತ್ತಕ್ಕೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಈ ವೇಳೆ ಕ್ರೀಸ್‌ಗಿಳಿದ ಪಾಂಡ್ಯ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸುತ್ತಿದ್ದರು. ಒಂದೆಡೆ ಪಾಂಡ್ಯ ಕೊನೆಯವರೆಗೂ ನಿಂತರೆ ಸೋಲು ಖಚಿತ ಎಂದು ಇಂಗ್ಲೆಂಡ್ ಆಟಗಾರರಲ್ಲಿ ನಡುಕ ಹುಟ್ಟಿತ್ತು. ಆದ್ರೆ ಕೊನೇ 2 ಓವರ್‌ಗಳಲ್ಲಿ 41 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸಲು ಮುಂದಾದ ಪಾಂಡ್ಯ ಲಾಂಗ್‌ಆಫ್‌ನಲ್ಲಿ ಕ್ಯಾಚ್ ನೀಡಿ ಔಟಾದರು. ಇದರೊಂದಿಗೆ ಟೀಂ ಇಂಡಿಯಾ ಗೆಲುವಿನ ಕನಸು ಕಸಿಯಿತು.
ಹಾರ್ದಿಕ್ ಪಾಂಡ್ಯ 35 ಎಸೆತಗಳಲ್ಲಿ 40 ರನ್ (2 ಸಿಕ್ಸರ್, 1 ಬೌಂಡರಿ) ಗಳಿಸಿದ್ರೆ, ಅಭಿಷೇಕ್ ಶರ್ಮಾ 24 ರನ್, ಅಕ್ಷರ್ ಪಟೇಲ್ 15 ರನ್, ತಿಲಕ್ ವರ್ಮಾ 18 ರನ್, ಸೂರ್ಯಕುಮಾರ್ ಯಾದವ್ 14 ರನ್ ಗಳಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 9 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿತ್ತು. ಆರಂಭಿಕನಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಸತತ 3ನೇ ಪಂದ್ಯದಲ್ಲೂ ಅಬ್ಬರಿಸಲು ವಿಫಲರಾದರು. ಇನ್ನೂ 2ನೇ ವಿಕೆಟ್‌ಗೆ ಜೊತೆಯಾದ ನಾಯಕ ಜೋಸ್ ಬಟ್ಲರ್ ಹಾಗೂ ಬೆನ್ ಡಕೆಟ್ ಜೋಡಿ ಆರಂಭದಲ್ಲೇ ಟೀಂ ಇಂಡಿಯಾ ಬೌಲರ್‌ಗಳ ಎದುರು ಅಬ್ಬರಿಸಿತು. 2ನೇ ವಿಕೆಟಿಗೆ ಈ ಜೋಡಿ 45 ಎಸೆತಗಳಲ್ಲಿ 76 ರನ್‌ಗಳ ಭರ್ಜರಿ ಜೊತೆಯಾಟ ನೀಡಿತು. ಇದರೊಂದಿಗೆ ಕೊನೆಯಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಸ್ಫೋಟಕ ಬ್ಯಾಟಿಂಗ್ ತಂಡದ ಸವಾಲಿನ ಮೊತ್ತಕ್ಕೆ ಕಾರಣವಾಯಿತು.
16ನೇ ಓವರ್‌ವರೆಗೂ ಇಂಗ್ಲೆಂಡ್ ತಂಡವು 8 ವಿಕೆಟ್‌ಗಳನ್ನು ಕಳೆದುಕೊಂಡು 127 ರನ್‌ಗಳನ್ನಷ್ಟೇ ಗಳಿಸಿತ್ತು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಲಿವಿಂಗ್‌ಸ್ಟೋನ್ ಅಬ್ಬರಿಸಿದರು. ಕೊನೆಯ 4 ಓವರ್‌ಗಳಲ್ಲಿ 44 ರನ್ ಕಲೆಹಾಕುವ ಮೂಲಕ ತಂಡಕ್ಕೆ ಉತ್ತಮ ಸ್ಕೋರ್ ತಂದುಕೊಟ್ಟರು. ಆರಂಭಿಕ ಬೆನ್ ಡಕೆಟ್ 51 ರನ್ (28 ಎಸೆತ, 2 ಸಿಕ್ಸರ್, 7 ಬೌಂಡರಿ) ಚಚ್ಚಿದರೆ, ಲಿಯಾಮ್ ಲಿವಿಂಗ್‌ಸ್ಟನ್ 24 ಎಸೆತಗಳಲ್ಲಿ ಸ್ಫೋಟಕ 43 ರನ್ (5 ಸಿಕ್ಸರ್, 1 ಬೌಂಡರಿ) ಚಚ್ಚಿದರು. ಇದರೊಂದಿಗೆ ನಾಯಕ ಜೋಸ್ ಬಟ್ಲರ್ 24 ರನ್ ಗಳ ಕೊಡುಗೆ ನೀಡಿದ್ರೆ, ಉಳಿದವರು ಅಲ್ಪಮೊತ್ತಕ್ಕೆ ಔಟಾದರು.
ಮಿಂಚಿದ ಚಕ್ರವರ್ತಿ:
ಇಂಗ್ಲೆಂಡ್ ಬ್ಯಾಟರ್‌ಗಳ ವಿರುದ್ಧ ಸತತ ಪಾರಮ್ಯ ಮೆರೆಯುತ್ತಿರುವ ವರುಣ್ ಚಕ್ರವರ್ತಿ 3ನೇ ಪಂದ್ಯದಲ್ಲೂ ಸ್ಪಿನ್ ಕೈಚಳಕ ತೋರಿದರು. 4 ಓವರ್‌ಗಳಲ್ಲಿ ಕೇವಲ 24 ರನ್ ಬಿಟ್ಟುಕೊಟ್ಟು ಜೋಸ್ ಬಟ್ಲರ್ ಸೇರಿದಂತೆ ಪ್ರಮುಖ 5 ವಿಕೆಟ್ ಕಿತ್ತರು. ಇದರೊಂದಿಗೆ ಹಾರ್ದಿಕ್ ಪಾಂಡ್ಯ 2 ವಿಕೆಟ್ ಹಾಗೂ ರವಿ ಬಿಷ್ಣೋಯಿ, ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
2023ರ ಏಕದಿನ ವಿಶ್ವಕಪ್ ನಂತರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ವೇಗಿ ಮೊಹಮ್ಮದ್ ಶಮಿ ಅವರು ಈ ಪಂದ್ಯದ ಮೂಲಕ ವಾಪಾಸ್ ಆಗಿದ್ದಾರೆ. ಮೂರು ಓವರ್ ಮಾಡಿದ ಅವರು ಯಾವುದೇ ವಿಕೆಟ್ ಪಡೆಯದೇ 25 ರನ್ ಬಿಟ್ಟುಕೊಟ್ಟರು.