ಮುಂಬೈ: ಟಿ20 ವಿಶ್ವಕಪ್‌ನ 5ನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಇಂಗ್ಲೆಂಡ್ 4 ರನ್‌ಗಳ ಜಯ ಸಾಧಿಸಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮ್ಯಾಚ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ನೇಪಾಳ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 180 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಇಂಗ್ಲೆಂಡ್ ಪರ ಜಾಕೋಬ್ ಬೆಥೆಲ್ (55), ಕ್ಯಾಪ್ಟನ್ ಹ್ಯಾರಿ ಬ್ರೂಕ್ (53) ಅರ್ಧಶತಕ ಗಳಿಸಿ ತಂಡಕ್ಕೆ ಕೊಡುಗೆ ನೀಡಿದರು. ವಿಲ್ ಜಾಕ್ಸ್ ಔಟಾಗದೇ 39 ರನ್ ನೆರವಿನಿಂದ ಇಂಗ್ಲೆಂಡ್ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಯಿತು.
ನೇಪಾಳ ತಂಡಕ್ಕೆ ಬ್ಯಾಟಿಂಗ್‌ನಲ್ಲಿ ಕ್ಯಾಪ್ಟನ್ ರೋಹಿತ್ ಪೌಡೆಲ್ 39 ಹಾಗೂ ದೀಪಿಂದರ್ ಸಿಂಗ್ 44 ರನ್ ಗಳಿಸಿ ನೆರವಾದರು. ಡೆತ್ ಓವರ್‌ನಲ್ಲಿ ಲೋಕೇಶ್ ಬಾಮ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ 20 ಎಸೆತಕ್ಕೆ 39 ರನ್ ಗಳಿಸಿ ಗೆಲುವಿನ ಭರವಸೆ ಮೂಡಿಸಿದ್ದರು. ಕೊನೆ ಓವರ್‌ನಲ್ಲಿ ನೇಪಾಳ ಗೆಲುವಿಗೆ 10 ರನ್ ಬೇಕಿತ್ತು. ಸ್ಯಾಮ್ ಕರನ್ ಕೇವಲ 5 ರನ್ ಬಿಟ್ಟುಕೊಟ್ಟರು. ಅಂತಿಮವಾಗಿ ಇಂಗ್ಲೆಂಡ್ ನಾಲ್ಕು ರನ್‌ಗಳ ಜಯ ಸಾಧಿಸಿತು.

