ಫಾಲೋ ಆನ್‌ಗೆ ತುತ್ತಾದ್ರೂ 1 ರನ್ ರೋಚಕ ಜಯ – 22 ವರ್ಷದ ಬಳಿಕ ನ್ಯೂಜಿಲೆಂಡ್ ಸಾಧನೆ

Public TV
3 Min Read
New Zealand 2

ವೆಲ್ಲಿಂಗ್ಟನ್: ನೀಲ್ ವಾಗ್ನರ್ (Neil Wagner) ಬೆಂಕಿ ಬೌಲಿಂಗ್ ಹಾಗೂ ಕೇನ್ ವಿಲಿಯಮ್ಸನ್ (Kane Williamson) ಶತಕದ ಬ್ಯಾಟಿಂಗ್ ನೆರವಿನಿಂದ ಕಿವೀಸ್ ಪಡೆ ಇಂಗ್ಲೆಂಡ್ (England) ವಿರುದ್ಧ 1 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ಅಂತರದಲ್ಲಿ ಸಮಬಲಗೊಳಿಸಿದೆ.

2ನೇ ಟೆಸ್ಟ್ ಪಂದ್ಯದ 5ನೇ ದಿನದಂದು ಕಿವೀಸ್ ಪಡೆ 1 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 1 ರನ್‌ನಿಂದ ಟೆಸ್ಟ್ ಪಂದ್ಯವನ್ನು ಗೆದ್ದ ವಿಶ್ವದ 2ನೇ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1993ರ ಜನವರಿ 26ರಂದು ವೆಸ್ಟ್ ಇಂಡೀಸ್ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ತಂಡವನ್ನು 1 ರನ್ ಅಂತರದಿಂದ ಮಣಿಸಿ ಈ ಸಾಧನೆ ಮಾಡಿತ್ತು. ಇದನ್ನೂ ಓದಿ: ಮ್ಯಾಜಿಕ್ ಮೆಸ್ಸಿಗೆ `ಅತ್ಯುತ್ತಮ ಪುರುಷರ ಆಟಗಾರ-2022′ ಪ್ರಶಸ್ತಿ

New Zealand 6

ಫಾಲೋ ಆನ್‌ಗೆ ಸಿಲುಕಿದ್ದ ನ್ಯೂಜಿಲೆಂಡ್ (New Zealand) ತಂಡ ಕೆನ್ ವಿಲಿಯಮ್ಸನ್ ಅವರ ಶತಕದ ನೆರವಿನಿಂದ ಎರಡನೇ ಇನ್ನಿಂಗ್ಸ್‌ನಲ್ಲಿ 483 ರನ್ ಕಲೆ ಹಾಕಿತ್ತು. ಆರಂಭಿಕರಾದ ಟಾಮ್ ಲಾಂಥಮ್ ಹಾಗೂ ಡಿವೋನ್ ಕಾನ್ವೆ ಮುರಿಯದ ಮೊದಲ ವಿಕೆಟ್ ಜೊತೆಯಾಟಕ್ಕೆ 149 ರನ್ ಕಲೆಹಾಕಿದ್ದರು. ಕಾನ್ವೆ 61 ರನ್ ಗಳಿಸಿ ಔಟಾದರೆ, ಲಾಂಥಮ್ 83 ರನ್ ಚಚ್ಚಿ ಪೆವಿಲಿಯನ್ ಸೇರಿದರು. 2ನೇ ಕ್ರಮಾಂಕದಲ್ಲಿ ಕ್ರೀಸ್‌ಗಳಿದ ಕೇನ್ ವಿಲೀಯಮ್ಸನ್ 282 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ 132 ರನ್ ಬಾರಿಸಿದರು. ಇದರೊಂದಿಗೆ ಡ್ಯಾರಿಯಲ್ ಮಿಚೆಲ್ 54 (54 ಎಸೆತ, 5 ಬೌಂಡರಿ, 1 ಸಿಕ್ಸರ್), ಟಾಮ್ ಬ್ಲಂಡೆಲ್ 90 ರನ್ (166 ಎಸೆತ, 9 ಬೌಂಡರಿ) ಗಳಿಸಿ ತಂಡಕ್ಕೆ ನೆರವಾದರು.

New Zealand 5

ಅಂತಿಮವಾಗಿ 2ನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 162.3 ಓವರ್‌ಗಳಲ್ಲಿ 483 ರನ್ ಗಳಿಸಿತ್ತು. ಈ ಮೂಲಕ ಇಂಗ್ಲೆಂಡ್ ತಂಡದ ಗೆಲುವಿಗೆ 258 ರನ್‌ಗಳ ಗುರಿ ನೀಡಿತ್ತು.

ತನ್ನ ಸರದಿ ಆರಂಭಿಸಿದ್ದ ಇಂಗ್ಲೆಂಡ್ 4ನೇ ದಿನದಾಟದ ಅಂತ್ಯಕ್ಕೆ 48 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಅಜೇಯ 153 ರನ್ ಗಳಿಸಿದ್ದ ಮಾಜಿ ನಾಯಕ ಜೋ ರೂಟ್, 2ನೇ ಇನ್ನಿಂಗ್ಸ್‌ನಲ್ಲಿಯೂ 113 ಎಸೆತಗಳಲ್ಲಿ 95 ರನ್ ಬಾರಿಸಿ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ನೀಲ್ ವ್ಯಾಗ್ನರ್ ಅವರು ಜೋ ರೂಟ್ (Joe Root) ಮತ್ತು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (32 ರನ್) ನಿರ್ಣಾಯಕ ವಿಕೆಟ್ ಪಡೆಯುವ ಮೂಲಕ ಗೆಲುವಿನ ಕನಸನ್ನು ಕಸಿದುಕೊಂಡರು. ಈ ನಡುವೆ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಹ್ಯಾರಿ ಬ್ರೂಕ್ ಒಂದು ಎಸೆತವನ್ನೂ ಎದುರಿಸದೇ ರನೌಟ್‌ಗೆ ತುತ್ತಾಗಿದ್ದು ಇಂಗ್ಲೆಂಡ್ ತಂಡಕ್ಕೆ ದೊಡ್ಡ ಪೆಟ್ಟು ನೀಡಿತ್ತು. ಅಂತಿಮವಾಗಿ ಇಂಗ್ಲೆಂಡ್ 74.2 ಓವರ್‌ಗಳಲ್ಲಿ 256 ರನ್ ಗಳಿಸುವ ಮೂಲಕ ವಿರೋಚಿತ ಸೋಲು ಕಂಡಿತು.

Joe Root

ನೀಲ್ ವ್ಯಾಗ್ನರ್ 2ನೇ ಇನ್ನಿಂಗ್ಸ್‌ನಲ್ಲಿ 62 ರನ್ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಪಡೆದರು. ನಾಯಕ ಟಿಮ್ ಸೌಥಿ 45 ರನ್ ನೀಡಿ 3 ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ 75 ರನ್ ನೀಡಿ 2 ವಿಕೆಟ್ ಕಿತ್ತರು. ಇದನ್ನೂ ಓದಿ: RCB, MI, Delhi ಅಭಿಮಾನಿಗಳಿಗೆ ನಿರಾಸೆ – 2023ರ ಐಪಿಎಲ್‌ನಿಂದ ಈ ಸ್ಟಾರ್ ಆಟಗಾರರು ಔಟ್

ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 435/8 ಡಿಕ್ಲೇರ್
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 209/10
ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ 483/10
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 256/10

New Zealand

22 ವರ್ಷದ ಬಳಿಕ ಸಾಧನೆ:
ಆಸ್ಟ್ರೇಲಿಯಾ ವಿರುದ್ಧ 2001ರಲ್ಲಿ ಫಾಲೋ ಆನ್‌ಗೆ ತುತ್ತಾಗಿದ್ದರೂ ಭಾರತ ಲಕ್ಷ್ಮಣ್‌ ಮತ್ತು ದ್ರಾವಿಡ್ ಸಾಹಸದಿಂದ ಜಯಗಳಿಸಿತ್ತು. ಆದಾದ ಬಳಿಕ ಇಲ್ಲಿಯವರೆಗೆ ಈ ಸಾಧನೆಯನ್ನು ಯಾವ ತಂಡ ಮಾಡಿರಲಿಲ್ಲ. ಈಗ 22 ವರ್ಷದ ಬಳಿಕ ನ್ಯೂಜಿಲೆಂಡ್ ಫಾಲೋ ಆನ್‌ಗೆ ಸಿಲುಕಿದ್ದರೂ ಪಂದ್ಯವನ್ನು ಗೆದ್ದುಕೊಂಡ ಸಾಧನೆ ಮಾಡಿದೆ. ಅಷ್ಟೇ ಅಲ್ಲದೇ ಫಾಲೋ ಆನ್ ಹೇರಿದ ಬಳಿಕ ಜಯಗಳಿಸಿದ ನಾಲ್ಕನೇ ಟೆಸ್ಟ್ ಪಂದ್ಯ ಇದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *