ರಾಮನಗರ: ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕನಕಪುರ ತಾಲೂಕಿನ ಚುಂಚಿಫಾಲ್ಸ್ ನಲ್ಲಿ ಕಾಲುಜಾರಿ ಕಂದಕಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ರಾಜರಾಜೇಶ್ವರಿನಗರದ ಆರ್‍ಎನ್‍ಎಸ್‍ಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತೃತೀಯ ವರ್ಷದ ಓದುತ್ತಿದ್ದ ಬಿಹಾರ ರಾಜ್ಯ ಪಾಟ್ನಾದ ಕೌಶಿಕ್(20) ಎಂದು ಗುರುತಿಸಲಾಗಿದೆ. ಮೇಕೆದಾಟಿನ ವೀಕ್ಷಣೆ ಬಳಿಕ ಚುಂಚಿಫಾಲ್ಸ್ ವೀಕ್ಷಣೆ ಮಾಡಿ ಅಲ್ಲಿಂದ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
Advertisement
Advertisement
ದಸರಾ ಅಂಗವಾಗಿ ಸಾಲು ರಜೆಗಳು ಬಂದ ಹಿನ್ನೆಲೆಯಲ್ಲಿ ಆರ್‍ಎನ್‍ಎಸ್‍ಐಟಿ ಎಂಜಿನಿಯರ್ ವಿದ್ಯಾರ್ಥಿಗಳಾದ ಮೃತ ಕೌಶಿಕ್, ಮಧ್ಯಪ್ರದೇಶದ ಮೆಹುಲ್, ಉತ್ತರ ಪ್ರದೇಶದ ಮಾಯಂಕ್ ಮತ್ತು ದಯಾನಂದಸಾಗರ ಎಂಜಿನಿಯರ್ ಕಾಲೇಜಿನ ವಿದ್ಯಾರ್ಥಿಗಳಾದ ಛತ್ತೀಸ್‍ಗಡದ ರಾಹುಲ್, ಉತ್ತರ ಕರ್ನಾಟಕದ ಪೂನಂ ಕುಮಾರಿ ಸೇರಿದಂತೆ ಆರು ಮಂದಿ ಮೂರು ದ್ವಿಚಕ್ರ ವಾಹನದಲ್ಲಿ ಕನಕಪುರ ತಾಲೂಕಿನ ಪ್ರವಾಸಿತಾಣ ಚುಂಚಿಫಾಲ್ಸ್ ಮತ್ತು ಮೇಕೆದಾಟಿಗೆ ಪ್ರವಾಸಕ್ಕೆ ತೆರಳಿದ್ದರು.
Advertisement
Advertisement
ಮೇಕೆದಾಟು ವೀಕ್ಷಿಸಿ ಚುಂಚಿ ಫಾಲ್ಸಿಗೆ ಬಂದ ವಿದ್ಯಾರ್ಥಿಗಳ ತಂಡ ಖುಷಿಯಿಂದಲೇ ಸೆಲ್ಫಿ ಮತ್ತು ಗುಂಪಾದ ತಂಡಗಳ ಭಾವಚಿತ್ರಗಳನ್ನು ತೆಗೆದುಕೊಂಡು ಭಾನುವಾರ ಸಾಯಂಕಾಲ 5 ಗಂಟೆಗೆ ಅಲ್ಲಿಂದ ತೆರಳಿ ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದ ಪಾರ್ಕಿಂಗ್ ಸ್ಥಳಕ್ಕೆ ಬಂದಿದ್ದಾರೆ. ಈ ಸ್ಥಳಕ್ಕೆ ಬಂದಾಗ ಕೌಶಿಕ್ ಜೊತೆಯಲ್ಲಿ ಇಲ್ಲದಿರುವ ವಿಚಾರ ತಿಳಿದು ಬಂದಿದೆ. ಹತ್ತಿರ ಎಲ್ಲೋ ಹೋಗಿರಬೇಕು ಎಂದು ಭಾವಿಸಿ ಪಾರ್ಕಿಗ್ ಸ್ಥಳದಲ್ಲಿ ಕುಳಿತುಕೊಂಡು ಕಾದರೂ ಕೌಶಿಕ್ ಬಂದಿರಲಿಲ್ಲ. ಹೀಗಾಗಿ ಸಂಜೆಯೇ ಚುಂಚಿ ಫಾಲ್ಸ್ ನಲ್ಲಿ ಹುಡುಕಾಟ ನಡೆಸಿದ್ದಾರೆ.
ಕೌಶಿಕ್ ಪತ್ತೆಯಾಗದ ಕಾರಣ ತಡರಾತ್ರಿ ಸಾತನೂರು ಪೊಲೀಸ್ ಠಾಣೆಗೆ ಬಂದು ವಿಚಾರ ತಿಳಿಸಿದ್ದಾರೆ. ಸಾತನೂರು ಪೋಲಿಸರು ಚುಂಚಿಫಾಲ್ಸ್ ಗೆ ತೆರಳಿ ಶೋಧ ಕಾರ್ಯ ನಡೆಸಿದಾಗ ಸೋಮವಾರ ಮಧ್ಯಾಹ್ನ ನಂತರ ಕೌಶಿಕ್ ಶವ ಫಾಲ್ಸ್ ಕಲ್ಲಿನ ಸಂದಿಯಲ್ಲಿ ಸಿಕ್ಕಿದೆ. ಸ್ಥಳೀಯರು ಹಾಗೂ ಪೋಲಿಸರು ಹರಸಾಹಸ ನಡೆಸಿ ಮೃತನ ಶವವನ್ನು ಮೇಲಕ್ಕೆ ಎತ್ತಿದ್ದಾರೆ. ಈ ಸಂಬಂಧ ಸಾತನೂರು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv