ಕಲಬುರಗಿ: ಧರ್ಮಕ್ಕಾಗಿ ಒಂದೆಡೆ ಕಚ್ಚಾಟ ನಡೆಯುತ್ತಿದ್ದರೆ ಮತ್ತೊಂದೆಡೆ ಲೋಕಕಲ್ಯಾಣಕ್ಕಾಗಿ ಡಿಪ್ಲೊಮಾ ಸಿವಿಲ್ ವಿದ್ಯಾರ್ಥಿನಿ ವೈರಾಗ್ಯ ತಳೆದು ಸನ್ಯಾಸಿನಿಯಾಗಿದ್ದಾರೆ. ಪ್ರಜ್ಞಾವಂತರಲ್ಲಿ ಇದು ಅಚ್ಚರಿ ತಂದ್ರೆ ಗ್ರಾಮೀಣ ಭಾಗದ ಜನ ಭಕ್ತಿಯ ಪರಾಕಾಷ್ಟೆ ಮೆರೆಯುತ್ತಿದ್ದಾರೆ.
ಹೌದು. ಕಲಬುರಗಿಯ ಗೌರ ಗ್ರಾಮದ ವಿಠಲ್ ಹಾಗೂ ಸಿದ್ದಮ್ಮ ದಂಪತಿಯ ಪುತ್ರಿ ಭಾಗ್ಯಶ್ರೀ ಡಿಪ್ಲೊಮಾ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡ್ತಿದ್ರು. ಆದ್ರೆ ಇದಕ್ಕಿದ್ದಂತೆ ಈಕೆಗೆ ಆಧ್ಯಾತ್ಮದತ್ತ ಒಲವು ಮೂಡಿದೆ. ಕಳೆದ ವರ್ಷ ಕನಸಿನಲ್ಲಿ ಮುಗಳಖೋಡ ಯಲ್ಲಾಲಿಂಗೇಶ್ವರ ಮಹಾರಾಜರು ದೈವಾನುಗ್ರಹ ನೀಡಿ ಸನ್ಯಾಸಿನಿ ಆಗುವಂತೆ ಹೇಳಿದ್ದಾರಂತೆ. ಹೀಗಾಗಿ ಈಕೆ ವಿದ್ಯಾಭ್ಯಾಸ ಬಿಟ್ಟು ಸನ್ಯಾಸಿನಿಯಾಗಿದ್ದಾರೆ. ಅಂತೆಯೇ ಯಲ್ಲಾಲಿಂಗ ಮಹಾರಾಜರ ಚಿಕ್ಕ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಅನುಷ್ಠಾನಕ್ಕೆ ಕುಳಿತಿದ್ದಾರೆ.
Advertisement
ಶ್ರಾವಣದ ಆರಂಭದಿಂದ ಅನ್ನ-ನೀರು ಸೇವಿಸದೇ ಮೌನ ವ್ರತಕ್ಕೆ ಕುಳಿತಿರೋ ಈ ಸನ್ಯಾಸಿನಿ 15 ದಿನಗಳ ಬಳಿಕ ಅನುಷ್ಠಾನವನ್ನ ಬಿಡಲಿದ್ದಾರಂತೆ. ಈಗಾಗಲೇ 8 ದಿನ ಈಕೆಯ ಅನುಷ್ಠಾನ ಪೂರೈಸಿದೆ. ಕಳೆದ ಒಂದು ವರ್ಷದಿಂದ ಗ್ರಾಮದ ಜನ ಕೂಡ ಈಕೆಯ ಬಳಿ ಬಂದು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರಂತೆ. ಈ ಬಾಲ ಸನ್ಯಾಸಿನಿಯ ಮುಖದಲ್ಲಿ ಯಲ್ಲಾಲಿಂಗೇಶ್ವರ ಮಹಾರಾಜರ ರೂಪವಿದೆ ಅಂತಾರೆ ಇಲ್ಲಿನ ಜನರು.
Advertisement
ಒಟ್ಟಿನಲ್ಲಿ ಡಿಪ್ಲೊಮಾ ಸಿವಿಲ್ ವಿದ್ಯಾಭ್ಯಾಸ ಮಾಡಿ ಎಂಜಿನಿಯರ್ ಆಗಬೇಕಾದ ಭಾಗ್ಯಶ್ರೀ ಸದ್ಯ ಸನ್ಯಾಸಿನಿಯಾಗಿದ್ದಾರೆ. ಇದು ಪ್ರಜ್ಞಾವಂತರಿಗೆ ಅಚ್ಚರಿ ಅನ್ನಿಸಿದ್ರೆ ಭಕ್ತಿಯ ಪರಾಕಾಷ್ಟೆಯಲ್ಲಿರೋ ಜನ ಯಲ್ಲಾಲಿಂಗೇಶ್ವರ ಮಹಾರಾಜರ ಕೃಪೆ ಅಂತಾ ಪೂಜಿಸ್ತಿದ್ದಾರೆ. ಸದ್ಯ ಈಕೆಯನ್ನು ಪೂಜಿಸಲು ಭಕ್ತಸಾಗರವೇ ಹರಿದುಬರ್ತಿದೆ.