ಚೆನ್ನೈ: ಸುಮಾರು 1 ವರ್ಷದ ಹಿಂದೆ 7ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನ ಕೊಲೆ ಮಾಡಿದ್ದ ಎಂಜಿನಿಯರ್‍ಗೆ ತಮಿಳುನಾಡಿನ ಕಂಚೀಪುರಂನ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಜೊತೆಗೆ ಆತನಿಗೆ 46 ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ.
ಚೆನ್ನೈನ ಅಪಾರ್ಟ್‍ಮೆಂಟ್ ಕಾಂಪ್ಲೆಕ್ಸ್ ಬಳಿ ತನ್ನ ನಾಯಿಮರಿಯೊಂದಿಗೆ ಆಟವಾಡಲು ಬರುತ್ತಿದ್ದ ಬಾಲಕಿ ಮೇಲೆ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಎಸ್. ದಶ್‍ವಂತ್(23) ಅತ್ಯಾಚಾರವೆಸಗಿದ್ದ. ನಂತರ ಮೃತದೇಹವನ್ನ ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದ. ಕಳೆದ ವರ್ಷ ಈತ ತಂದೆಯಿಂದ ಜಾಮೀನು ಪಡೆದು ಹೊರಬಂದಾಗ ತನ್ನ ತಾಯಿಯನ್ನೂ ಕೊಲೆ ಮಾಡಿದ್ದ ಎಂದು ವರದಿಯಾಗಿದೆ.
Advertisement
Advertisement
ಇಂದಿನಿಂದ ನಾವು ನೆಮ್ಮದಿಯಾಗಿ ನಿದ್ದೆ ಮಾಡಬಹುದು. ಅವನೊಬ್ಬ ರಾಕ್ಷಸ ಎಂದು ಮೃತ ಬಾಲಕಿಯ ತಂದೆ ಬಾಬು ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
Advertisement
ಏನಿದು ಪ್ರಕರಣ?: 2017ರ ಫೆಬ್ರವರಿಯಲ್ಲಿ ದಶ್‍ವಂತ್, ನಾಯಿಮರಿಯನ್ನ ತೋರಿಸಿ ಬಾಲಕಿಯನ್ನ ತನ್ನ ಪಾರ್ಟ್‍ಮೆಂಟ್‍ಗೆ ಕರೆದೊಯ್ದಿದ್ದ. ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಮೃತದೇಹವನ್ನ ಬ್ಯಾಗ್‍ನಲ್ಲಿ ತುಂಬಿ ಹೆದ್ದಾರಿ ಬಳಿ ಸುಟ್ಟು ಹಾಕಿದ್ದ.
Advertisement
ಘಟನೆಗೆ ಸಾಕ್ಷಿಗಳು ಇಲ್ಲದಿದ್ದರಿಂದ ಈ ಪ್ರಕರಣ ದೊಡ್ಡ ಸವಾಲಾಗಿತ್ತು. ಕೇವಲ ಸಾಂದರ್ಭಿಕ ಪುರಾವೆಗಳನ್ನ ಅವಲಂಬಿಸಬೇಕಿತ್ತು. ವೈಜ್ಞಾನಿಕವಾಗಿ ಆರೋಪ ಸಾಬೀತು ಮಾಡಬೇಕಿತ್ತು. ಬಾಲಕಿಯ ಬಟ್ಟೆಯಿಂದ ಸಂಗ್ರಹಿಸಲಾದ ವೀರ್ಯ ದಶವಂತ್‍ನದ್ದು ಎಂದು ಡಿಎನ್‍ಎ ಪರೀಕ್ಷೆಯಿಂದ ದೃಢಪಟ್ಟಿತ್ತು. ಆರೋಪಿಯ ಬೆಡ್‍ರೂಮಿನಲ್ಲಿ ಬಾಲಕಿಯ ಆಭರಣ ಕೂಡ ಪತ್ತೆಯಾಗಿತ್ತು ಎಂದು ಬಾಲಕಿಯ ಪೋಷಕರ ಪರ ವಕೀಲರಾದ ಕಣ್ಣದಾಸನ್ ಹೇಳಿದ್ದಾರೆ.
ಪೊಲೀಸರು ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಡಿಸೆಂಬರ್‍ನಲ್ಲಿ ದಶವಂತ್ ಜಾಮೀನಿನ ಮೇಲೆ ಹೊರಬಂದಾಗ ತನ್ನ ತಾಯಿ ಸರಳಾ ಅವರನ್ನು ಕೂಡ ಕೊಲೆ ಮಾಡಿದ್ದಾನೆ ಎಂಬ ಆರೋಪವಿದೆ. ದಶವಂತ್ ತಾಯಿಯನ್ನ ಕೊಂದು, ಅವರ ಒಡವೆಗಳನ್ನ ದೋಚಿ ಮುಂಬೈಗೆ ಪರಾರಿಯಾಗಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಚೆನ್ನೈ ಪೊಲೀಸರಿಗೆ ಮಂಕುಬೂದಿ ಎರಚಿ ಓಡಿಹೋಗಿದ್ದ ಆತ ನಂತರ ಮುಂಬೈನಲ್ಲಿ ಸಿಕ್ಕಿಬಿದ್ದಿದ್ದ. ಒಂದು ದಿನದ ಬಳಿಕ ಆತನನ್ನು ಬಂಧಿಸಲಾಗಿತ್ತು.
ಆರೋಪಿ ವಿರುದ್ಧ ಮತ್ತೊಂದು ಪ್ರತ್ಯೇಕ ಪ್ರಕರಣ ಇನ್ನೂ ಬಾಕಿ ಇದೆ.