ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಇಸಿಐಆರ್ ದಾಖಲಿಸಿದೆ.
ದೂರು ದಾಖಲಾದ ಬಳಿಕ ಪೊಲೀಸರು ಎಫ್‍ಐಆರ್ ಹಾಕುವಂತೆ ಇಡಿ ಅಧಿಕಾರಿಗಳು ಎನ್‍ಫೋರ್ಸ್ ಮೆಂಟ್ ಕೇಸ್ ಇನ್‍ಫಾರ್ಮೆಶನ್ ರಿಪೋರ್ಟ್(ಇಸಿಐಆರ್) ಹಾಕುತ್ತಾರೆ. ಇಲಾಖೆಯ ವರದಿ ಆಧಾರದಲ್ಲಿಯೇ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್‍ಎ) ಸೆಕ್ಷನ್ 120-ಬಿ ಅಡಿ ಒಳಸಂಚು, ಅಕ್ರಮದಲ್ಲಿ ಭಾಗಿ ಆರೋಪದಡಿ 2 ವಾರಗಳ ಹಿಂದೆಯೇ ಇಡಿ ಕೇಸ್ ದಾಖಲಿಸಿದೆ.
ಕೇಸ್ ದಾಖಲಾದ ಬಳಿಕ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಬಹುದು. ವಿಚಾರಣೆ ವೇಳೆ ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ನೀಡದೇ ಇದ್ದರೆ ಇಡಿ ಕೋರ್ಟ್ ಮೂಲಕ ಜಾಮೀನು ರಹಿತ ವಾರಂಟ್ ಪಡೆಯುವ ಸಾಧ್ಯತೆಯಿದೆ. ಒಂದು ವೇಳೆ ಕೋರ್ಟ್ ನಿಂದ ಈ ಆದೇಶ ಪ್ರಕಟವಾದರೆ ಇಡಿ ಡಿಕೆಶಿಯನ್ನು ಬಂಧಿಸಿ ವಿಚಾರಣೆ ನಡೆಸಬಹುದು. ಇದನ್ನು ಓದಿ: ಇಡಿ ಬಂಧನದಿಂದ ತಪ್ಪಿಸಿಕೊಳ್ಳಲು ಡಿಕೆಶಿ ಮಾಸ್ಟರ್ ಪ್ಲಾನ್!
ಆರೋಪ ಏನು?
2017ರ ಆಗಸ್ಟ್‍ನಲ್ಲಿ ನಡೆದಿದ್ದ ದಾಳಿ- ದೆಹಲಿಯ ಫ್ಲ್ಯಾಟ್‍ಗಳಲ್ಲಿ 8.5 ಕೋಟಿ ರೂ. ಹಣ ಸಿಕ್ಕಿತ್ತು. ಆದಾಯ ತೆರಿಗೆ ಸಲ್ಲಿಸಿದ್ದ ಆರೋಪಪಟ್ಟಿಯನ್ನೇ ಆಧರಿಸಿ ಇಡಿ ಇಸಿಐಆರ್ ದಾಖಲಿಸಿದ್ದು ಡಿಕೆಶಿ ನಂಬರ್ 1 ಆರೋಪಿಯಾಗಿದ್ದಾರೆ. ಡಿಕೆಶಿ ಶರ್ಮಾ ಟ್ರಾವೆಲ್ಸ್ ಮಾಲೀಕ ಎಸ್‍ಕೆ ಶರ್ಮಾರಿಂದ ಹವಾಲಾ ದಂಧೆ ನಡೆದಿದ್ದು, ಇತರೆ ಮೂವರ ನೆರವಿನೊಂದಿಗೆ ನಿರಂತರವಾಗಿ ತೆರಿಗೆ ವಂಚಿತ ಹಣ ಸರಬರಾಜು ಮಾಡಿದ್ದಾರೆ. ದೆಹಲಿ, ಬೆಂಗಳೂರು ನಿವಾಸಗಳ ನಡುವೆ ಹಣ ಸಾಗಾಟಕ್ಕಾಗಿಯೇ ಬೃಹತ್ ನೆಟ್‍ವರ್ಕ್ ಇದ್ದು, ಈ ಕೆಲಸಕ್ಕಾಗಿ ಡಿಕೆಶಿ ವ್ಯಕ್ತಿಗಳ ನೆಟ್‍ವರ್ಕ್ ಬೆಳೆಸಿಕೊಂಡಿದ್ದಾರೆ. ಕರ್ನಾಟಕ ಭವನದ ಉದ್ಯೋಗಿ ಹನುಮಂತಯ್ಯ ಹವಾಲಾ ಹಣದ ಹೊಣೆಗಾರಿಕೆಯನ್ನು ಉಸ್ತುವರಿ ವಹಿಸಿಕೊಂಡಿದ್ದ ಅಷ್ಟೇ ಅಲ್ಲದೇ ದೆಹಲಿಯಲ್ಲಿ ಡಿಕೆಶಿ ಕಳಿಸ್ತಿದ್ದ ಹವಾಲಾ ಹಣವನ್ನು ಸಂಗ್ರಹಿಸುತ್ತಿದ್ದ. ಶರ್ಮಾ ಟ್ರಾವೆಲ್ಸ್‍ನ ಶರ್ಮಾ ಪರ ಕರ್ನಾಟಕ ಭವನದ ಸಿಬ್ಬಂದಿ ರಾಜೇಂದ್ರ ಕೆಲ್ಸ ಮಾಡುತ್ತಿದ್ದ.
ಐಟಿ ದಾಳಿಯ ವೇಳೆ ದೆಹಲಿಯ ಸಫ್ದರ್‍ಜಂಗ್‍ನಲ್ಲಿ 8,59,69,100 ರೂ. ಹಣ ಸಿಕ್ಕಿತ್ತು. ಇದರಲ್ಲಿ 41,03,600 ರೂ. ಕೃಷಿ ಆದಾಯದಿಂದ ಬಂದಿದ್ದಾಗಿ ಐಟಿ ಮುಂದೆ ಡಿಕೆಶಿ ಹೇಳಿಕೆ ನೀಡಿದ್ದರು. ಹಣ ಚಲಾವಣೆ ಬಗ್ಗೆ ಸಫ್ದರ್ ಜಂಗ್ ಎನ್‍ಕ್ಲೇವ್ ಫ್ಲ್ಯಾಟ್‍ನ ಕಾರು ಚಾಲಕನಿಂದಲೇ ಮಾಹಿತಿ ನೀಡಿದ್ದ. ಆದರೆ ಆದಾಯ ತೆರಿಗೆ ಅಧಿಕಾರಿಗಳ ಪ್ರಶ್ನೆಗೆ ದಾಖಲೆ ಸಮೇತ ಡಿಕೆಶಿ ಉತ್ತರ ನೀಡಿರಲಿಲ್ಲ. ದಾಳಿ ವೇಳೆ ಆರೋಪಿಗಳು ಬರೆದಿದ್ದ ಡೈರಿಗಳನ್ನ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಡಿಕೆಶಿ ಮುಂದಿರುವ ದಾರಿ ಏನು?
ಜಾರಿ ನಿರ್ದೇಶನಾಲಯ ದಾಖಲಿಸಿರುವ ಕೇಸ್ ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋಗಬಹುದು. ಇಡಿ ತನಿಖೆಗೆ ಮಧ್ಯಂತರ ತಡೆ ನೀಡುವಂತೆ ಹೈಕೋರ್ಟ್ ಗೆ ಅರ್ಜಿ ಹಾಕಬಹುದು. ನಿರೀಕ್ಷಣಾ ಜಾಮೀನು ಕೋರಿ ಆರ್ಥಿಕ ಅಪರಾಧಗಳ ಕೋರ್ಟ್ ಗೆ ಅರ್ಜಿ ಸಲ್ಲಿಸಬಹುದು. ಬೆಂಗಳೂರಿನ ಕೋರ್ಟ್ ನಲ್ಲೇ ವಿಚಾರಣೆ ನಡೆಸುವಂತೆ ಕೋರಿ ಕಾನೂನು ಹೋರಾಟ ನಡೆಸಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv