ಬಂಡುಕೋರರು ರಾಜಧಾನಿ ಡಮಾಸ್ಕಸ್‌ ಪ್ರವೇಶಿಸುತ್ತಿದ್ದಂತೆ ಸಿರಿಯಾ ತೊರೆದ ಅಧ್ಯಕ್ಷ ಅಸ್ಸಾದ್‌

Public TV
1 Min Read
Syria Bashar al Assad

ಡಮಾಸ್ಕಸ್‌: ಬಂಡುಕೋರರು ಸಿರಿಯಾ (Syria) ರಾಜಧಾನಿ ಡಮಾಸ್ಕಸ್‌ (Damascus) ಪ್ರವೇಶಿಸುತ್ತಿದ್ದಂತೆ ಅಧ್ಯಕ್ಷ ಬಶರ್‌ ಅಲ್‌ ಅಸ್ಸಾದ್‌ (Bashar al-Assad) ದೇಶವನ್ನು ತೊರೆದು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.

ಮಾಧ್ಯಮದ ಜೊತೆ ಮಾತನಾಡಿದ ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯದ ಮುಖ್ಯಸ್ಥ ರಾಮಿ ಅಬ್ದುಲ್‌ ರೆಹಮಾನ್, ಭಾನುವಾರ ಮುಂಜಾನೆ ವಿಮಾನದ ಮೂಲಕ ತೆರಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಬಂಡುಕೋರರು ಅಸ್ಸಾದ್‌ ಯುಗಾಂತ್ಯವಾಗಿದೆ ಎಂದು ಘೋಷಿಸುತ್ತಿದ್ದಂತೆ ಸಿರಿಯಾದ ಪ್ರಧಾನಿ ಮೊಹಮ್ಮದ್ ಗಾಜಿ ಅಲ್-ಜಲಾಲಿ ಅವರು ಅಧಿಕಾರ ಹಸ್ತಾಂತರಕ್ಕೆ ಸರ್ಕಾರ ಸಿದ್ಧವಾಗಿದೆ. ಜನರು ಆಯ್ಕೆ ಮಾಡುವ ನಾಯಕತ್ವಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಸಿರಿಯಾದಲ್ಲಿ ಹೆಚ್ಚಿದ ಹಿಂಸಾಚಾರ – ಕೂಡಲೇ ದೇಶವನ್ನು ತೊರೆಯಿರಿ; ಭಾರತೀಯರಿಗೆ ಸೂಚನೆ

 

ಜುಲೈ 2000 ಇಸ್ವಿಯಲ್ಲಿ ಅಧಿಕಾರ ಸ್ವೀಕರಿಸಿದ್ದ ಬಶರ್‌ ಅಲ್‌ ಅಸ್ಸಾದ್‌ ಸರ್ಕಾರಕ್ಕೆ ರಷ್ಯಾ (Russia) ಮತ್ತು ಇರಾನ್‌ (Iran) ಬೆಂಬಲ ನೀಡಿತ್ತು. ಇಸ್ರೇಲ್‌ ಯುದ್ಧದಲ್ಲಿ ಇರಾನ್‌ ತೊಡಗಿಸಿಕೊಂಡಿದ್ದರೆ ಉಕ್ರೇನ್‌ ಯುದ್ಧದಲ್ಲಿ ರಷ್ಯಾ ತೊಡಗಿಸಿಕೊಂಡಿದೆ. ಈ ಎರಡು ದೇಶಗಳ ಯುದ್ಧದಲ್ಲಿ ತೊಡಗಿಸಿಕೊಂಡಿದ್ದರ ಪರಿಣಾಮ ಸಿರಿಯಾ ಈಗ ಏಕಾಂಗಿಯಾಗಿದೆ.

ಸಿರಿಯಾದಲ್ಲಿ ಕಳೆದ 13 ವರ್ಷಗಳಿಂದ ಅಂತರ್ಯುದ್ಧ ನಡೆಯುತ್ತಿದೆ. ಈ ಹಿಂದೆ ಅಸ್ಸಾದ್ ವಿರೋಧಿ ಬಂಡಾಯಗಾರರಲ್ಲಿ ಒಗ್ಗಟ್ಟು ಇರಲಿಲ್ಲ. ಆದರೆ ಈ ಬಾರಿ ಎಲ್ಲರೂ ಒಗ್ಗಟ್ಟಾಗಿರುವ ಕಾರಣ ಬಂಡುಕೋರರ ಸಂಘಟನೆ ಶಕ್ತಿಯುತವಾಗಿದೆ.

2011ರಲ್ಲಿ ಶಾಲೆಯ ಗೋಡೆಗಳ ಮೇಲೆ ಅಸ್ಸಾದ್ ವಿರೋಧಿ ಬರಹಗಳನ್ನ ಬರೆದ ಕೆಲ ಯುವಕರನ್ನು ಬಂಧಿಸಲಾಗಿತ್ತು. ಬಂಧಿತ ಯುವಕರಿಗೆ ಸರ್ಕಾರ ಹಿಂಸೆ ನೀಡುತ್ತಿದೆ ಎಂಬ ಆರೋಪ ಬಂದ ನಂತರ ಸಿರಿಯಾದಲ್ಲಿ ಅಂತರ್‌ ಯುದ್ಧ ಆರಂಭವಾಗಿತ್ತು.

 

Share This Article