ನವದೆಹಲಿ: ದೆಹಲಿ ಮೆಟ್ರೋದ ಮೆಜೆಂತಾ ಲೈನ್‍ನ ಚಾಲಕ ರಹಿತ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರದ ವೇಳೆ ಗೋಡೆಗೆ ಡಿಕ್ಕಿ ಹೊಡೆದಿದೆ.
ಇಂದು ಪ್ರಾಯೋಗಿಕ ಸಂಚಾರದ ವೇಳೆ ಕಲಿಂದಿ ಕುಂಜ್ ಡಿಪೋ ಬಳಿ ರೈಲು ಗೋಡೆಗೆ ಡಿಕ್ಕಿ ಹೊಡೆದಿದ್ದು, ನೆಲಕ್ಕೆ ಬೀಳೋದ್ರಿಂದ ಸ್ವಲ್ಪದರಲ್ಲೇ ತಪ್ಪಿದೆ. ರೈಲಿನ ಬ್ರೇಕ್ ವ್ಯವಸ್ಥೆಯನ್ನ ಪರೀಕ್ಷಿಸಲಾಗಿರಲಿಲ್ಲ ಎಂದು ದೆಹಲಿ ಮೆಟ್ರೋ ಹೇಳಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ಪ್ರಾಯೋಗಿಕ ಪರೀಕ್ಷೆಯ ರೈಲಿನ ಬ್ರೇಕ್ ವ್ಯವಸ್ಥೆ ಪರಿಶೀಲಿಸದೆಯೇ ವರ್ಕ್‍ಶಾಪ್‍ನಿಂದ ತೆಗೆದುಕೊಂಡು ಹೋಗಲಾಗಿತ್ತು. ಇದರಿಂದಾಗಿ ರೈಲು ಗೋಡೆಗೆ ಡಿಕ್ಕಿಯಾಗಿದೆ ಎಂದು ದೆಹಲಿ ಮೆಟ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಾಮಾನ್ಯ ಪ್ರಕ್ರಿಯೆಯ ಪ್ರಕಾರ, ವರ್ಕ್‍ಶಾಪಿಗೆ ರೈಲು ಪ್ರವೇಶಿಸಿದಾಗ ಅದರ ಬ್ರೇಕ್ ಸ್ಥಗಿತಗೊಳಿಸಲಾಗಿರುತ್ತದೆ. ಇದರಿಂದ ರೈಲಿನ ಬ್ರೇಕ್ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಪರಿಶೀಲಿಸಬಹುದು. ಹಾಗೇ ಪ್ರಕ್ರಿಯೆ ಪ್ರಕಾರ ರೈಲು ಶೆಡ್‍ನಿಂದ ಹೊರಡುವ ಮುನ್ನ ಇಲ್ಲಿನ ಸಿಬ್ಬಂದಿ ಅದರ ಬ್ರೇಕ್ ಪರೀಕ್ಷಿಸಬೇಕು. ವರ್ಕ್‍ಶಾಪ್‍ನಲ್ಲಿ ರೈಲು ಸಂಚಾರವನ್ನು ಕೈಯಾರೆ ಮಾಡಲಾಗುತ್ತದೆ ಹೊರತು ಸಿಗ್ನಲಿಂಗ್ ವ್ಯವಸ್ಥೆಯಿಂದಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಡಿಸೆಂಬರ್ 25, ಕ್ರಿಸಮಸ್ ದಿನದಂದು ಪ್ರಧಾನಿ ನರೇಂದ್ರ ಮೋದಿ ಕಲ್ಕಾಜಿ ಮಂದಿರ್ ನಿಂದ ಬೊಟಾನಿಕಲ್ ಗಾರ್ಡನ್‍ವರೆಗಿನ ಮೆಜೆಂತಾ ಲೈನ್ ಉದ್ಘಾಟನೆ ಮಾಡಬೇಕಿತ್ತು. ಆದರೆ ಈಗ ಈ ಘಟನೆಯಿಂದಾಗಿ ಕಾರ್ಯಕ್ರಮ ನಡೆಯುವ ಬಗ್ಗೆ ಪ್ರಶ್ನೆ ಎದ್ದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.