ಬೆಂಗಳೂರು: ಸಂಬಳ ನೀಡದ ಮಾಲೀಕನನ್ನು ಕಾರ್ಮಿಕರೇ ಕಿಡ್ನ್ಯಾಪ್ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಬೆಂಗಳೂರಿನ ಹಲಸೂರಿನಲ್ಲಿ ಇನ್ಪೂಟಿಕ್ ಸಾಫ್ಟ್ ವೇರ್ ಕಂಪನಿ ಮಾಲೀಕ ಸುಜಯ್ ಎಂಬವರನ್ನು ಕಾರ್ಮಿಕರು ಅಪಹರಣ ಮಾಡಿದ್ದಾರೆ. ಮಾಲೀಕ ಸುಜಯ್ ಕಳೆದ ಮೂರು ತಿಂಗಳಿನಿಂದ ಕಾರ್ಮಿಕರಿಗೆ ಸಂಬಳ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾತನಾಡುವ ನೆಪದಲ್ಲಿ ಕಾರ್ಮಿಕರು ಕರೆಸಿ ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ಮದ್ದೂರಿನಲ್ಲಿ ತೋಟದ ಮನೆಯಲ್ಲಿ ಕೂಡಿ ಹಾಕಿದ್ದರು.
ಈ ವೇಳೆ ಮಾಲೀಕ ಸುಜಯ್ ಕಾರ್ಮಿಕರಿಗೆ ಸಂಬಳ ನೀಡುವ ಭರವಸೆ ನೀಡಿದ್ದಾರೆ. ನಂತರ ನಾಲ್ವರು ಕಾರ್ಮಿಕರು ವಾಪಸ್ ಮನೆಗೆ ಬಿಟ್ಟಿದ್ದಾರೆ. ಆದರೆ ಮನೆಗೆ ಬಂದ ಕಂಪನಿ ಮಾಲೀಕ ಸುಜಯ್ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾಲೀಕ ಸುಜಯ್ ಆಸ್ಪತ್ರೆಯಿಂದಲೂ ನಾಪತ್ತೆಯಾಗಿದ್ದಾರೆ.
ಮತ್ತೆ ಕಾರ್ಮಿಕರೇ ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯಕ್ಕೆ ಈ ಕುರಿತು ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಂಜಯ್, ರಾಕೇಶ್, ನಿರಂಜನ್ ಮತ್ತು ದರ್ಶನ್ ಎಂದು ಗುರುತಿಸಲಾಗಿದೆ. ಆದರೆ ಆರೋಪಿಗಳ ಬಂಧನದ ನಂತರವೂ ಕಂಪನಿ ಮಾಲೀಕ ಸುಜಯ್ ಪತ್ತೆಯಾಗಲಿಲ್ಲ.