Connect with us

Karnataka

ರಾಜ್ಯಪಾಲನಾಗಲ್ಲ, ವಿಜ್ಞಾನಿಯಾಗಿಯೇ ಇರ್ತೀನಿ: ಕೇಂದ್ರದ ಆಫರ್ ತಿರಸ್ಕರಿಸಿದ್ದ ಯು.ಆರ್.ರಾವ್

Published

on

ಉಡುಪಿ: ಇಸ್ರೋ ಮಾಜಿ ಅಧ್ಯಕ್ಷ ಪ್ರೊ. ಯು. ಆರ್ ರಾವ್ ಅವರಿಗೆ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲರಾಗುವ ಅವಕಾಶ ಸಿಕ್ಕಿತ್ತು. ಆದರೆ ನಾನು ವಿಜ್ಞಾನಿಯಾಗಿಯೇ ಮುಂದುವರೆಯುತ್ತೇನೆ. ರಾಜಕಾರಣಿಯಾಗುವುದಿಲ್ಲ ಎಂದು ಹೇಳಿ ತನಗೆ ಸಿಕ್ಕಿದ್ದ ಆಫರ್ ಅನ್ನು ಅವರು ನಯವಾಗಿ ತಿರಸ್ಕರಿಸಿದ್ದರು.

ಯು.ಆರ್ ರಾವ್ ಉಡುಪಿ ಜಿಲ್ಲೆಯ ಅದಮಾರು ಗ್ರಾಮದವರು. ಬಾಲ್ಯದ ಶಿಕ್ಷಣ ಉಡುಪಿಯಲ್ಲಿ ಮುಗಿಸಿದ ಉಡುಪಿ ರಾಮಚಂದ್ರ ರಾವ್ ಅವರಿಗೆ ಮಹಾರಾಷ್ಟ್ರ ರಾಜ್ಯಪಾಲರಾಗುವ ಅವಕಾಶ ಸಿಕ್ಕಿತ್ತು ಎನ್ನುವ ಮಾಹಿತಿಯನ್ನು ರಾವ್ ಕುಟುಂಬಸ್ಥರು ಹೊರಹಾಕಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ರಾವ್ ಸಂಬಂಧಿ ಅದಮಾರು ಶ್ರೀಪತಿ ಆಚಾರ್ಯ, ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ರಾವ್ ಅವರಿಗೆ ಮಹಾರಾಷ್ಟ್ರದ ರಾಜ್ಯಪಾಲ ಹುದ್ದೆಯ ಆಫರ್ ಕೊಟ್ಟಿದ್ದರು. ನಾನು ವಿಜ್ಞಾನಿ. ರಾಜಕಾರಣಿಯಾಗಲು ಬಯಸುವುದಿಲ್ಲ ಎಂದು ಪ್ರಧಾನಿಯಿಂದ ಬಂದ ನಿವೇದನೆಯನ್ನು ನಯವಾಗಿ ತಿರಸ್ಕರಿಸಿದ್ದರು ಎಂದು ಅವರು ನೆನಪು ಮಾಡಿಕೊಂಡಿದ್ದಾರೆ. ಪ್ರೊಫೆಸರ್ ರಾವ್ ಅವರು ವಿಜ್ಞಾನ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಅವರಿಂದ ದೇಶಕ್ಕೆ- ವಿಶ್ವಕ್ಕೆ ಸಿಕ್ಕ ಕೊಡುಗೆ ಮಹತ್ತರವಾದದ್ದು ಎಂದು ಅವರು ಹೇಳಿದರು.

ಯು. ಆರ್ ರಾವ್ ಪ್ರೌಢಶಿಕ್ಷಣವನ್ನು ಉಡುಪಿಯ ಮಿಷನ್ ಕಂಪೌಡಿನ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಪೂರೈಸಿದ್ದರು. ತಾಯಿ ಕೃಷ್ಣವೇಣಿ ಅವರ ಮನೆ ಉಡುಪಿಯ ಅದಮಾರುವಿನಲ್ಲಿತ್ತು. ಅಲ್ಲೇ ರಾವ್ ಅವರ ಶಿಕ್ಷಣ ಆರಂಭವಾಗಿತ್ತು. ಅದಮಾರುವಿನ ಮನೆ ಸದ್ಯ ಬಿದ್ದು ಹೋಗಿದೆ. ರಾವ್ ಅವರ ತಂದೆ ಕಟ್ಟಿಸಿದ ಉಡುಪಿಯ ಬನ್ನಂಜೆಯ ಮನೆಯನ್ನು ಯು.ಆರ್ ರಾವ್ ಬಾವ ಖರೀದಿ ಮಾಡಿ ಸದ್ಯ ಅಲ್ಲೇ ನೆಲೆಸಿದ್ದಾರೆ.

ಅಡುಗೆ ಭಟ್ಟನ ಮಗ ವಿಜ್ಞಾನಿ: ಯು.ಆರ್ ರಾವ್ ತಂದೆ ಲಕ್ಷ್ಮೀನಾರಾಯಣ ಅವರು ಬಹಳ ಚೆನ್ನಾಗಿ ಆಡುಗೆ ಮಾಡುತ್ತಿದ್ದರು. ಚೆನ್ನಾಗಿ ಅಡುಗೆ ಮಾಡಿ- ಅದರಲ್ಲಿ ಬಂದ ದುಡ್ಡಿನಲ್ಲಿ ಯು.ಆರ್ ರಾವ್ ಅವರಿಗೆ ಶಿಕ್ಷಣ ಕೊಡಿಸಿದ್ದರು. ಬಳ್ಳಾರಿಯಲ್ಲಿ ಕ್ಯಾಟರಿಂಗ್ ಬ್ಯುಸಿನೆಸ್ ಮಾಡುತ್ತಿದ್ದ ರಾಜ್ ತಂದೆ, ಆ ಭಾಗದಲ್ಲಿ ಅಡುಗೆ ವಿಚಾರದಲ್ಲಿ ಭಾರೀ ಹೆಸರುವಾಸಿಯಾಗಿದ್ದರು. ಕುಟುಂಬವನ್ನು ಸಾಕಿ ಸಲಹಿದ್ದು, ಮಕ್ಕಳ ವಿದ್ಯಾಭ್ಯಾಸ ಮಾಡಿಸಿದ್ದು, ಮನೆ ಕಟ್ಟಿಸಿದ್ದು ಎಲ್ಲವೂ ಬಾಣಸಿಗ ವೃತ್ತಿಯಿಂದಲೇ.

ಭಾರತ ರತ್ನ ಸಿಗಬೇಕಿತ್ತು: ಯು.ಆರ್ ರಾವ್ ಅವರಿಗೆ ಭಾರತ ರತ್ನ ಗೌರವ ನೀಡಬೇಕಿತ್ತು. ಪದ್ಮ ಪ್ರಶಸ್ತಿ ನೀಡಿದ್ದು ಗೌರವದ ಸಂಗತಿಯೇ ಆಗಿದೆ. ಆದ್ರೆ ಇದಕ್ಕಿಂತ ಹೆಚ್ಚಿನ ಸನ್ಮಾನ ರಾವ್ ಅವರಿಗೆ ಸಿಗಬೇಕಿತ್ತು ಎಂದು ಹೇಳಿದರು. ಅವರು ಭಾರತಕ್ಕೆ ಬರುವ ಮನಸ್ಸು ಮಾಡಿದ್ದೇ ದೊಡ್ಡ ವಿಚಾರ. ಅಮೆರಿಕದಲ್ಲಿ ಇರುತ್ತಿದ್ದರೆ ಇನ್ನಷ್ಟು ಉನ್ನತ ಹುದ್ದೆಗೆ ಹೋಗುತ್ತಿದ್ದರೋ ಏನೋ..? ಎಲ್ಲವನ್ನೂ ತ್ಯಜಿಸಿ ಅವರು ತಾಯ್ನಾಡಿನ ಸೇವೆಗೆ ಬಂದಿದ್ದು ದೊಡ್ಡ ವಿಷಯ ಎಂದು ಶ್ರೀಪತಿ ಆಚಾರ್ಯ ತಿಳಿಸಿದರು.

 

ಯು.ಆರ್.ರಾವ್ ಸೋಮವಾರ ಬೆಳಗಿನ ಜಾವ ಸುಮಾರು 2.30ರ ಸಮಯದಲ್ಲಿ ಮೃತಪಟ್ಟಿದ್ದಾರೆ. ವಿಜ್ಞಾನಿಯ ನಿಧನಕ್ಕೆ ನಾಡಿನ ಗಣ್ಯರೆಲ್ಲ ಸಂತಾಪ ಸೂಚಿಸಿದ್ದಾರೆ. ರಾವ್ ಭಾರತದ ಮೊದಲ ಕೃತಕ ಉಪಗ್ರಹ ಆರ್ಯಭಟ ದಲ್ಲಿಯೂ ಕೆಲಸ ನಿರ್ವಹಿಸಿದ್ದರು. ಇದೇ ತಿಂಗಳು ಹೃದಯ ಸಂಬಂಧಿ ಕಾಯಿಲೆಗೆ ಸಂಬಂಧಿಸಿದಂತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು.

1984 ಮತ್ತು 1994ರ ಅವಧಿಯಲ್ಲಿ ರಾವ್ ಇಸ್ರೋದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇದಕ್ಕೂ ಮೊದಲು ಸತೀಶ್ ಧವನ್ ಸಂಸ್ಥೆಯ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದರು. ರಾವ್ ಉಡುಪಿ ಜಿಲ್ಲೆಯ ಆದ್ಮಾಪುರ ಗ್ರಾಮದಲ್ಲಿ ಜನಸಿದ್ದರು. ರಾವ್ ಅವರು ದೇಶದ ಶ್ರೇಷ್ಠ ವಿಜ್ಞಾನಿಗಳಾದ ಸತೀಶ್ ಧವನ್, ವಿಕ್ರಂ ಸಾರಾಭಾಯ್, ಎಂ.ಜಿ.ಕೆಮೆನನ್ ಅವರ ಅನೇಕ ಪ್ರೊಜೆಕ್ಟ್ ನಲ್ಲಿ ಭಾಗಿಯಾಗಿದ್ದರು.

ಇದೇ ವರ್ಷ ರಾವ್ ಅವರಿಗೆ ಭಾರತ ಸರ್ಕಾರದಿಂದ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಶಸ್ತಿ ಬಂದ ವೇಳೆ `ಇದು ನನಗೆ ಮರಣೋತ್ತರವಾಗಿ ನೀಡಲಾಗುತ್ತದೆ ಎಂದು ತಿಳಿದಿದ್ದೆ’ ಎಂದು ರಾವ್ ಹಾಸ್ಯ ಮಾಡಿದ್ದರು.

 

Click to comment

Leave a Reply

Your email address will not be published. Required fields are marked *