ಕನ್ನಡ ಸಾಹಿತ್ಯ ಲೋಕದ ಹಿರಿಯ ಸಾಹಿತಿ, ಖ್ಯಾತ ಕಾದಂಬರಿಕಾರ ಕೆ.ಟಿ. ಗಟ್ಟಿ (K.T Gatti) ಇಂದು ನಿಧನರಾಗಿದ್ದಾರೆ. ಕಾಸರಗೋಡು ಜಿಲ್ಲೆಯ ಕೂಡ್ಲು ನಿವಾಸಿಯಾಗಿದ್ದ ಗಟ್ಟಿ ಅವರಿಗೆ 85 ವರ್ಷ ವಯಸ್ಸಾಗಿತ್ತು. ಉಡುಪಿಯ ಟಿ.ಎಂ.ಪೈ ಮಹಾವಿದ್ಯಾಲಯದಲ್ಲಿ ಅಧ್ಯಾಪಕರೂ ಆಗಿದ್ದ ಗಟ್ಟಿ, ಕಾದಂಬರಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರು.
ಕರ್ನಾಟಕ ರಾಜ್ಯೋತ್ಸವ, ಅಕಾಡೆಮಿ ಪುರಸ್ಕಾರಗಳು ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿದ್ದವು. ಇಂದು ಮಧ್ಯಾಹ್ನ 3ರ ತನಕ ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಸಂಜೆ ಮಂಗಳೂರಿನ ಕೆಎಂಸಿ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.
Advertisement
ಹಿರಿಯ ಪತ್ರಕರ್ತ-ಎನ್.ಎಸ್.ಶ್ರೀಧರ ಮೂರ್ತಿ ನೆನಪಿಸಿಕೊಂಡಿದ್ದು ಹೀಗೆ: ಕನ್ನಡಕ್ಕೆ ವಿಶಿಷ್ಟ ಕೊಡುಗೆಯನ್ನು ಕೊಟ್ಟ ಮಹತ್ವದ ಲೇಖಕರು. ಸುಮಾರು ಮೂರು ದಶಕಗಳ ಕಾಲ ಅವರ ಒಡನಾಟದ ಸವಿಯನ್ನು ಅನುಭವಿಸಿದ ಸಾರ್ಥಕತೆ ನನ್ನದು. ನಾವು ಚಿಕ್ಕವರಿದ್ದಾಗ ಅವರ ಕಾದಂಬರಿ-ಕತೆಗಳು ಕನ್ನಡದ ಬಹುತೇಕ ಎಲ್ಲಾ ಪತ್ರಿಕೆಗಳಲ್ಲಿಯೂ ಬರುತ್ತಿದ್ದವು. ಹಾಗೆ ನೋಡಿದರೆ ಅವರ ಬಗ್ಗೆ ನನಗೆ ಒಲವನ್ನು ಮೂಡಿಸಿದವಳು ತಂಗಿ ಮಾಲಿನಿ ಗುರು ಪ್ರಸನ್ನ. ಅಬ್ರಾಹ್ಮಣ ನನ್ನನ್ನು ಅಪಾರವಾಗಿ ಸೆಳೆದ ಮೊದಲ ಕಾದಂಬರಿ ಅಲ್ಲಿಂದ ನಾನು ಅವರ ಕತೆ-ಕಾದಂಬರಿಗಳನ್ನು ಹುಡುಕಿ ಓದಲು ಆರಂಭಿಸಿದೆ. ‘ತರಂಗ’ ವಾರ ಪತ್ರಿಕೆಯಲ್ಲಿ ‘ನಿರಂತರ’ ಎನ್ನುವ ಕಾದಂಬರಿ ಧಾರಾವಾಹಿಯಾಗಿ ಬಂದಿತು. (ಇದರ ಮೇಲೆ ರಿಪೋರ್ಟ್ ಫ್ರಂ 2020 ಪ್ರಭಾವವಿತ್ತು ಅನ್ನೋದು ಗೊತ್ತಾಗಿದ್ದು ಬಹಳ ತಡವಾಗಿ) ಇದು ಎಷ್ಟು ಇಷ್ಟವಾಗಿ ಬಿಟ್ಟಿತು ಎಂದರೆ ಆಗ ಕನ್ನಡದ ಶ್ರೇಷ್ಠ ಕಾದಂಬರಿಕಾರರು ಯಾರು? ಎಂದರೆ ನಾನು ನಿಸ್ಸಂದೇಹವಾಗಿ ಕೆ.ಟಿ.ಗಟ್ಟಿ ಅನ್ನುತ್ತಿದ್ದೆ. ‘ಮನೆ’, ‘ಕಾಮಯಜ್ಞ’, ಅಮುಕ್ತ, ಅವಿಭಕ್ತರು, ಕರ್ಮಣ್ಯೇ ವಾಧಿಕಾರಸ್ತೇ, ಕೂಪ, ಬಿಸಿಲುಗುದುರೆ, ಮೃತ್ಯೋರ್ಮಾ ಅಮೃತಂಗಮಯ, ಯುಗಾಂತರ, ಶಿಲಾತಪಸ್ವಿ, ಸ್ವರ್ಣಮೃಗ, ಅರಗಿನ ಮನೆ ಹೀಗೆ ಬಹುಷ: ಪದವಿ ಮುಗಿಸುವ ವೇಳೆಗೆ ಅವರ ಬಹುತೇಕ ಕಾದಂಬರಿಗಳನ್ನು ಓದಿ ಮುಗಿಸಿದ್ದೆ.
Advertisement
Advertisement
ನಾನು ಮಂಗಳೂರಿಗೆ ಓದಲು ಹೋದಾಗ ಗಟ್ಟಿ ಉಜಿರೆಯಲ್ಲಿದ್ದರು. ಬಹುಬೇಗ ಆತ್ಮೀಯವರೂ ಆಗಿ ಬಿಟ್ಟರು, ಅವರ ಉಜಿರೆ ಮನೆ ‘ವನಸಿರಿ’ಯಲ್ಲಿ ಕಳೆದ ಗಂಟೆಗಳಿಗೆ ಲೆಕ್ಕವೇ ಇಲ್ಲ.ಸ್ವಲ್ಪ ಸಮಯ ಸಿಕ್ಕರೂ ಸಾಕು ಉಜಿರೆಗೆ ಓಡಿ ಹೋಗುತ್ತಿದ್ದವು. ಗಟ್ಟಿಯವರ ವ್ಯಕ್ತಿತ್ವಕ್ಕೆ ಹಲವು ವಿಶಿಷ್ಟ ಅಯಾಮಗಳಿದ್ದವು. ಅವರು ಶಿಕ್ಷಣ, ಸಂಸ್ಕೃತಿ, ಪರಿಸರ, ರಾಜಕೀಯ ಹೀಗೆ ಹಲವು ಕ್ಷೇತ್ರಗಳ ಬಗ್ಗೆ ನಿರರ್ಗಳವಾಗಿ ಮಾತನಾಡ ಬಲ್ಲವರಾಗಿದ್ದರು. ಅವರ ಸಾಂಗತ್ಯ ನನ್ನನ್ನು ವೈಚಾರಿಕವಾಗಿ ಗಟ್ಟಿಗೊಳಿಸಿತು ಎನ್ನುವುದನ್ನು ನಾನು ಕೃತಜ್ಞತೆಯಿಂದ ನೆನೆಪು ಮಾಡಿ ಕೊಳ್ಳುತ್ತೇನೆ.
Advertisement
ನಾನು ‘ಮಲ್ಲಿಗೆ’ ಗೆ ಬಂದಾಗ ಕೆ.ಟಿ.ಗಟ್ಟಿ ಕತೆಗಳನ್ನು ಕೊಟ್ಟರು. ಡೆಡ್ ಲೈನ್ ಒಳಗೆ ನಾವು ಬಯಸಿದ ಪದ ಮಿತಿಯಲ್ಲಿ ಅವರ ಕತೆ ಬರುತ್ತಿತ್ತು. ಯಾವುದೇ ಸಂಪಾದಕರಿಗೆ ಅವರು ಪ್ರಿಯವಾಗ ಬಲ್ಲ ಲೇಖಕರೇ.. ಆದರೆ ಅವರಿಂದ ಬದಲಾವಣೆ ಪಡೆಯೋದು ಸಾಧ್ಯವೇ ಇರಲಿಲ್ಲ., ‘ಕತೆಯೊಂದು ಬಹಳ ದೊಡ್ಡದಾಯಿತು ಕಿರಿದು ಮಾಡ ಬಹುದೆ?’ ಎಂದು ಕೇಳಿದ್ದಕ್ಕೆ ‘ನಿಮಗೆ ಬೇಡದಿದ್ದರೆ ವಾಪಸ್ಸು ಕಳುಹಿಸಿ’ ಎಂದು ಕಟುವಾಗಿಯೇ ಹೇಳಿದ್ದರು. ‘ನವಂಬರ್ 10’ ಕಾದಂಬರಿ ಹಿಂದೆ ಮಲ್ಲಿಗೆಯಲ್ಲಿಯೇ ಧಾರವಾಹಿಯಾಗಿ ಬಂದಿತ್ತು. ಮರುಮುದ್ರಣ ಮಾಡ್ತೀನಿ ಎಂದರೆ ಅವರು ಒಪ್ಪಲಿಲ್ಲ. ಕನ್ನಡದಲ್ಲಿ ಫ್ಯಾಂಟಸಿ ಎಳೆಗಳನ್ನು ಜೋಡಿಸಿ ಬೆಚ್ಚಿ ಬೇಳಿಸುವ ವಾಸ್ತವದ ಕಾದಂಬರಿಗಳನ್ನು ಕೊಟ್ಟವರಲ್ಲಿ ಗಟ್ಟಿ ಪ್ರಮುಖರು. ಇದು ಅದೇ ಸಾಲಿಗೆ ಸೇರಿದ್ದ ಕಾದಂಬರಿ. ಶಬ್ದಗಳು ಕಾದಂಬರಿಯನ್ನು ನಾನು ಓದಿದ್ದು ಬಹಳ ತಡವಾಗಿ. ಹಾಗೆ ನೋಡಿದರೆ ಅದು ಬಂದ ಕಾಲಕ್ಕೆ ಖಂಡಿತವಾಗಿಯೂ ನವ್ಯರಿಗೆ ಉತ್ತರದ ಹಾಗಿತ್ತು. ಮಾತಿನ ಬಗ್ಗೆ ಮಾತಾಡ್ತಾ ಮೌನದ ಬಗ್ಗೆ ಯೋಚಿಸ ಬಲ್ಲ ವಿಶಿಷ್ಟ ಪ್ರತಿಭೆ ಅವರದು. ಅವರ ‘ತೀರ’ ಆತ್ಮಕತೆ ಓದಿದರೆ ಇಂತಹ ಹಲವು ಪ್ರಸಂಗಗಳು ಸಿಕ್ಕುತ್ತವೆ.
ಕೆ.ಟಿ.ಗಟ್ಟಿಯವರ ನನಗೆ ಬಹಳ ಇಷ್ಟವಾದ ‘ಕರ್ಮಣ್ಯೇ ವಾಧಿಕಾರಸ್ತೆ ಮತ್ತು ನಿನ್ನೆ, ಇಂದು ನಾಳೆ ಎರಡು ಕಾದಂಬರಿಗಳು ಮರು ಮುದ್ರಣವಾದಾಗ ಅದರ ಬಗ್ಗೆ ಮಾತನಾಡುವ ಅದೃಷ್ಟ ನನಗೆ ಸಿಕ್ಕಿತ್ತು. ಅದರಲ್ಲಿಯೂ ಕರ್ನಾಟಕದ ರಾಜಕೀಯ ವಿಶ್ಲೇಷಣೆಯಂತಿರುವ ‘ನಿನ್ನೆ ಇಂದು ನಾಳೆ’ ಕಾದಂಬರಿ ರೂಪುಗೊಂಡ ಚರ್ಚೆಯಲ್ಲಿ ನಾನು ಅವರ ಜೊತೆಗೆ ಭಾಗಿಯಾಗಿದ್ದೆ. ನಾನು ನನ್ನ ಮಾತಿನಲ್ಲಿ ಇದನ್ನು ವಿವರವಾಗಿ ಹೇಳಿದೆ. ಅವತ್ತು ಕೆ.ಟಿ.ಗಟ್ಟಿ ಬಂದಿರಲಿಲ್ಲ. ಪ್ರಕಾಶಕರಾದ ಇಂದಿರಾ ಸುಂದರ್ ನನ್ನ ಮಾತುಗಳನ್ನು ಗಟ್ಟಿಯವರಿಗೆ ಹೇಳಿದರಂತೆ. ಮರು ದಿನವೇ ಗಟ್ಟಿಯವರು ಪೋನ್ ಮಾಡಿದರು. ಆಗಿನ್ನೂ ಅವರ ನೆನಪಿನ ಶಕ್ತಿ ಬಹಳ ಕುಗ್ಗಿರಲಿಲ್ಲ. ಉಜಿರೆಯ ದಿನಗಳನ್ನು ಬಹಳ ನೆನಪು ಮಾಡಿಕೊಂಡು ಮಂಗಳೂರಿಗೆ ಬನ್ನಿ ಎಂದರು. ಮುಂದೆ ಆಗಾಗ ಪೋನಿನಲ್ಲಿ ಮಾತ್ರ ಮಾತು.. ಇನ್ನು ಅದೂ ಇರುವುದಿಲ್ಲ. ಆದರೆ ಅವರು ಕಲಿಸಿಕೊಟ್ಟ ಪಾಠಗಳು, ಕೊಟ್ಟು ಬರಹಗಳು ಸದಾ ಜೊತೆಗಿರುತ್ತವೆ.