ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ವಿರುದ್ಧವಾಗಿ ಕಾಂಗ್ರೆಸ್ (Congress) ಬೆಂಬಲಿತ ಕೆಲವು ಸಂಘಟನೆಗಳು, ಕಾಂಗ್ರೆಸ್ ಪ್ರೇರಣೆಯಿಂದ ಹಾಗೂ ಕಾಂಗ್ರೆಸ್ ಕೂಡ ಬೀದಿಗಿಳಿದು ಅವರ ಹೇಳಿಕೆಯನ್ನು ವಿರೋಧಿಸುತ್ತಿವೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ (Chalavadi Narayanaswamy) ಆಕ್ಷೇಪಿಸಿದರು.
ವಿಧಾನಸೌಧದಲ್ಲಿ ಮಾತಾಡಿದ ಅವರು ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು. ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ಎಂದು ಹಾಡು ಕೇಳಿದ್ದೇವೆ. ಇದನ್ನು ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕು ಎಂದ ಅವರು ಈ ಹೋರಾಟಗಾರರಿಗೆ ಅರ್ಥವಾದ ಸತ್ಯಾಂಶ ಏನು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿ.ಟಿ.ರವಿ ಪ್ರಕರಣದಲ್ಲಿ ಸರ್ಕಾರದ ನಡೆ ಖಂಡನೀಯ – ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಬಿಜೆಪಿ ಮನವಿ
ಅಮಿತ್ ಶಾ ಅವರ ಮಾತಿನಿಂದ ಕೆಲವರಿಗೆ ಅಪಮಾನವಾಗಿದೆ. ನನಗೂ ಅದು ಗೊತ್ತಿದೆ. ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಜೀವಿತಾವಧಿಯಿಂದ ಇಲ್ಲಿಯವರೆಗೆ ಅವರ ವಿರುದ್ಧವಾಗಿ ನಡೆದುಕೊಂಡ ವಿಷಯವನ್ನು ಸಂಪೂರ್ಣವಾಗಿ ವಿವರಿಸಿದ್ದರಿಂದ ಕಾಂಗ್ರೆಸ್ಸಿಗೆ ಮುಜುಗರವಾಗಿದೆ. ಅಪಮಾನವಾಗಿದ್ದು ಸಹಿಸಲಾಗದ ಪರಿಸ್ಥಿತಿಗೆ ಅವರು ಬಂದು ನಿಂತಿದ್ದಾರೆ ಎಂದು ಹೇಳಿದರು.