ಅಬುದಾಭಿ: ವಿಶ್ವದ ದಢೂತಿ ಮಹಿಳೆ ಎನಿಸಿಕೊಂಡಿದ್ದ ಎಮಾನ್ ಅಹ್ಮದ್ ಅಬುದಾಭಿಯಲ್ಲಿ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ.
ತನ್ನ 37ನೇ ಹುಟ್ಟುಹಬ್ಬ ಆಚರಿಸಿಕೊಂಡ ಒಂದು ವಾರದಲ್ಲೇ ಎಮಾನ್ ಮೃತಪಟ್ಟಿದ್ದಾರೆ. ಇಲ್ಲಿನ ಬುರ್ಜೀಲ್ ಆಸ್ಪತ್ರೆಯ ಅಧಿಕಾರಿಗಳು ಎಮಾನ್ ಸಾವನ್ನು ದೃಢಪಡಿಸಿದ್ದಾರೆ. ಹೃದಯ ಕಾಯಿಲೆ, ಕಿಡ್ನಿ ವೈಫಲ್ಯ ಹಾಗೂ ಇನ್ನಿತರೆ ಸಂಬಂಧಿತ ರೋಗದಿಂದ ಎಮಾನ್ ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ.
Advertisement
ಎಮಾನ್ ಯುನೈಟೆಡ್ ಅರಬ್ ಎಮಿರೈಟ್ಸ್‍ಗೆ ಬಂದಾಗಿನಿಂದ ಸುಮಾರು 20 ವಿವಿಧ ತಜ್ಞ ವೈದ್ಯರ ತಂಡ ಆಕೆಯ ಆರೋಗ್ಯ ಸ್ಥಿತಿಯ ವಿಚಾರಣೆ ಮಾಡುತ್ತಿದ್ದರು. ಎಮಾನ್ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೇಳಿಕೊಳ್ಳುತ್ತವೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ.
Advertisement
ಈಜಿಪ್ಟ್‍ನ ಅಲೆಕ್ಸಾಂಡ್ರಿಯಾ ನಿವಾಸಿಯಾದ ಎಮಾನ್‍ರನ್ನು ಮುಂಬೈನ ಸೈಫೀನಾ ಆಸ್ಪತ್ರೆಗೆ ತೂಕ ಇಳಿಕೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಮುಂಬೈನಲ್ಲಿ ಮೂರು ತಿಂಗಳು ಚಿಕಿತ್ಸೆ ಪಡೆದ ನಂತರ ಮೇ 4ರಂದು ಬುರ್ಜೀಲ್ ಆಸ್ಪತ್ರೆಗೆ ಎಮಾನ್‍ರನ್ನು ರವಾನಿಸಲಾಗಿತ್ತು.
Advertisement
Advertisement
37 ವರ್ಷದ ಎಮಾನ್ ಫೆಬ್ರವರಿ 11ರಂದು ಮುಂಬೈಗೆ ಬಂದಾಗ 504ಕೆಜಿ ತೂಕವಿದ್ದರು. ಆಕೆಯನ್ನು ವಿಶ್ವದ ದಢೂತಿ ಮಹಿಳೆ ಎಂದೇ ಪರಿಗಣಿಸಲಾಗಿತ್ತು. ಸೈಫೀ ಆಸ್ಪತ್ರೆಯಲ್ಲಿ ಬಾರಿಯಾಟ್ರಿಕ್ ಸರ್ಜರಿ ಹಾಗೂ ಊಟದ ಪಥ್ಯದಿಂದ ಆಕೆ 300 ಕೆಜಿ ತೂಕ ಇಳಿಸಿಕೊಳ್ಳಲು ಸಹಾಯವಾಗಿತ್ತು ಎಂದು ಇಲ್ಲಿನ ವೈದ್ಯರು ಹೇಳಿದ್ದರು. ಈ ಹಿಂದೆ ವೈದ್ಯರು ಎಮಾನ್ ಗುಣಮುಖರಾಗುತ್ತಿರವ ಬಗ್ಗೆ ವಿಡಿಯೋಗಳನ್ನ ಹಂಚಿಕೊಂಡು, ಅಂದುಕೊಂಡಿದ್ದಕ್ಕಿಂತ ಮೂರು ಪಟ್ಟು ವೇಗವಾಗಿ ಎಮಾನ್ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ರು.
ಎರಡನೇ ಹಂತದ ಚಿಕಿತ್ಸೆ ಅಂತ್ಯದ ವೇಳೆಗೆ ಎಮಾನ್ ತನ್ನ ಕೈಯ್ಯಾರೆ ತಾನೇ ಊಟ ಮಾಡುವಂತಾಗುತ್ತಾರೆ. ನಿಯಮಿತ ಪಥ್ಯದಿಂದ ಅಗತ್ಯ ತೂಕ ಇಳಿಸಿಕೊಂಡ ನಂತರ ಎಲೆಕ್ಟ್ರಿಕ್ ವ್ಹೀಲ್ ಚೇರ್‍ನಲ್ಲಿ ಓಡಾಡುವಂತಾಗುತ್ತಾರೆ ಎಂದು ಅಬುದಾಭಿಯ ಬುರ್ಜೀಲ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಯಸೀನ್ ಎಲ್ ಶಾಹತ್ ಹೇಳಿದ್ದರು.
ವೈದ್ಯರ ವಿರುದ್ಧ ಕಿಡಿಕಾರಿದ್ದ ಸಹೋದರಿ: ಇದೇ ಏಪ್ರಿಲ್ ನಲ್ಲಿ ಎಮಾನ್ ಅಹ್ಮದ್ ಸಹೋದರಿ ಷೈಮಾ ಸೆಲೀಮ್ ಮುಂಬೈನ ವೈದ್ಯ ಲಕ್ದವಾಲಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಭಾರತಕ್ಕೆ ಬಂದು ಎಮಾನ್ ಅಹ್ಮದ್ ತೂಕ ಇಳಿಸಿಕೊಂಡಿದ್ದಾರೆ ಎಂದು ವೈದ್ಯರು ಹೇಳುತ್ತಿರೋದು ಸುಳ್ಳು. ಬರೋಬ್ಬರಿ 500 ಕೆಜಿ ತೂಕವಿದ್ದ ಎಮಾನ್ ದೇಹದ ತೂಕ ಇಳಿಸುತ್ತೇವೆ ಅಂತಾ ವೈದ್ಯರು ಭರವಸೆ ನೀಡಿ ಭಾರತಕ್ಕೆ ಕರೆತಂದಿದ್ದರು. ಆದ್ರೆ ಇಲ್ಲಿ ಆಕೆಯ ದೇಹದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬದಲಾಗಿ ಮತ್ತಷ್ಟು ಅಸ್ವಸ್ಥಗೊಂಡಿದ್ದಾಳೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿದ್ದರು.
ಆದ್ರೆ ಇಮಾನ್ ಸಹೋದರಿ ಆರೋಪವನ್ನು ವೈದ್ಯ ಲಕ್ದವಾಲಾ ತಳ್ಳಿ ಹಾಕಿದ್ದರು. ಎಮಾನ್ ಚಿಕಿತ್ಸೆಗೂ ಮುನ್ನ 500 ಕೆಜಿ ತೂಕವಿದ್ರು. ಚಿಕಿತ್ಸೆ ಬಳಿಕ ಆಕೆ ತೂಕ 172 ಕೆಜಿಗೆ ಇಳಿದಿದೆ. ಆದ್ರೆ ಮುಂದಿನ ಚಿಕಿತ್ಸಾ ವೆಚ್ಚವನ್ನು ಉಳಿಸಿಕೊಳ್ಳಲು ಎಮಾನ್ ಕುಟುಂಬಸ್ಥರು ಸುಳ್ಳು ಆರೋಪ ಮಾಡ್ತಿದ್ದಾರೆಂದು ಲಕ್ದವಾಲಾ ಪ್ರತಿಕ್ರಿಯೆ ನೀಡಿದ್ದರು. ಎಮಾನ್ ಚಿಕಿತ್ಸೆಗೆ ಯಾರೂ ಮುಂದೆ ಬಾರದೇ ಇದ್ದಾಗ ಮುಂಬೈ ವೈದ್ಯರು ಕಷ್ಟಪಟ್ಟು ಈಜಿಪ್ಟ್ ನಿಂದ ಮುಂಬೈಗೆ ಎಮಾನ್ ರನ್ನು ಕರೆ ತಂದಿದ್ದರು.