ಕೊನೆಗೂ ಭಾರತಕ್ಕೆ ಬಂತು ಟೆಸ್ಲಾ| ಮುಂದಿನ ವಾರ ಶೋರೂಂ ಓಪನ್‌ – EV ಕಾರಿನ ಬೆಲೆ ಎಷ್ಟು?

Public TV
3 Min Read
model y is SUV TESLA Elon Musk 1

ಮುಂಬೈ: ಎಲಾನ್ ಮಸ್ಕ್ (Elon Musk) ನೇತೃತ್ವದ ಎಲೆಕ್ಟ್ರಿಕ್‌ ಕಾರು (Electric Car) ಕಂಪನಿ ಟೆಸ್ಲಾ (Tesla) ಮುಂದಿನ ವಾರ ಭಾರತದಲ್ಲಿ (India) ತನ್ನ ಮೊದಲ ಶೋರೂಂ ತೆರೆಯಲಿದೆ.

ಜುಲೈ 15 ರಂದು ಮುಂಬೈನಲ್ಲಿ ತನ್ನ ಮೊದಲ ಶೋರೂಂ ತೆರೆಯಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ವಿಶ್ವದ ಮೂರನೇ ಅತಿದೊಡ್ಡ ಅಟೋಮೊಬೈಲ್‌ ಮಾರುಕಟ್ಟೆಯಾದ (Automobile Market) ಭಾರತದಲ್ಲಿ ಅಧಿಕೃತ ಕಾರ್ಯಾಚರಣೆಯನ್ನು ಪ್ರಾರಂಭಿಸುವತ್ತ ಒಂದು ಹೆಜ್ಜೆ ಇಟ್ಟಿದೆ.

ಮಾರ್ಚ್‌ನ ಆರಂಭದಲ್ಲಿ, ಟೆಸ್ಲಾ ಮುಂಬೈನಲ್ಲಿ ತನ್ನ ಮೊದಲ ಶೋರೂಂ ಸ್ಥಳಕ್ಕಾಗಿ ಗುತ್ತಿಗೆ ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿತ್ತು. ಯುರೋಪ್ ಮತ್ತು ಚೀನಾದಲ್ಲಿ ಟೆಸ್ಲಾ ಕಾರುಗಳ ಮಾರಾಟ ಕಡಿಮೆಯಾಗುತ್ತಿರುವ ಸಂದರ್ಭದಲ್ಲೇ ಟೆಸ್ಲಾ ಭಾರತಕ್ಕೆ ಎಂಟ್ರಿಯಾಗುತ್ತಿದೆ. ಇದನ್ನೂ ಓದಿ: ಭಾರತ್NCAP ನಲ್ಲಿ ಟಾಟಾ ಹ್ಯಾರಿಯರ್ EVಗೆ ಸಿಕ್ತು 5 ಸ್ಟಾರ್ ರೇಟಿಂಗ್

model y is SUV TESLA Elon Musk 3

ಕೆಲವು ತಿಂಗಳ ಹಿಂದೆ ಟೆಸ್ಲಾ ತನ್ನ ಭಾರತೀಯ ಕಾರ್ಯಾಚರಣೆಗಳಿಗಾಗಿ ತನ್ನ ನೇಮಕಾತಿ ಪ್ರಕ್ರಿಯೆ ಆರಂಭಿಸಿತ್ತು. ದೆಹಲಿ-ಎನ್‌ಸಿಆರ್‌ನಲ್ಲಿ ಮತ್ತೊಂದು ಶೋರೂಂ ತೆರೆಯುವ ನಿರೀಕ್ಷೆಯಿದೆ.

ಕೇಂದ್ರ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಟೆಸ್ಲಾ ಭಾರತದಲ್ಲಿ ಉತ್ಪದನಾ ಘಟಕ ತೆರೆಯುವುದಿಲ್ಲ ಎಂದು ಹೇಳಿದ್ದರು. ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಕಂಪನಿಗಳು ಭಾರತದಲ್ಲಿ ಉತ್ಪದನಾ ಘಟಕೆ ತೆರೆಯಬಾರದು. ಅಮೆರಿಕದಲ್ಲೇ ಉತ್ಪದನಾ ಘಟಕ ತೆರೆಯುವಂತೆ ಒತ್ತಡ ಹಾಕುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಟೆಸ್ಲಾ ಭಾರತದಲ್ಲಿ ಘಟಕ ತೆರೆಯುತ್ತಿಲ್ಲ.

ಬೆಲೆ ಎಷ್ಟು?
ಬ್ಲೂಮ್‌ಬರ್ಗ್ ವರದಿಯ ಪ್ರಕಾರ ಚೀನಾದಲ್ಲಿ ತಯಾರಾದ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಟೆಸ್ಲಾ ಮುಂದಾಗಿದೆ. ಪ್ರಸ್ತುತ ವಿಶ್ವದ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಕ್ರಾಸ್‌ಓವರ್‌ ಎಸ್‌ಯುವಿ ಮಾಡೆಲ್‌ ವೈ ಕಾರುಗಳನ್ನು ಆರಂಭದಲ್ಲಿ ಭಾರತದಲ್ಲಿ ಮಾರಾಟ ಮಾಡಲು ಟೆಸ್ಲಾ ಸಿದ್ಧತೆ ನಡೆಸಿದೆ. ಇದನ್ನೂ ಓದಿ: 14.89 ಲಕ್ಷಕ್ಕೆ ಹೋಂಡಾ ಸಿಟಿ ಸ್ಪೋರ್ಟ್ ಎಡಿಷನ್ ಬಿಡುಗಡೆ ಕಾರ್‌ನಲ್ಲಿ ಏನು ಬದಲಾವಣೆಯಾಗಿದೆ?

ಈಗಾಗಲೇ ಟೆಸ್ಲಾ ತನ್ನ ಶಾಂಘೈ ಸ್ಥಾವರದಿಂದ ಐದು ಮಾಡೆಲ್ ವೈ ವಾಹನಗಳನ್ನು ಮುಂಬೈಗೆ ತಂದಿದೆ. ಈ ವಾಹನದ ಮೂಲ ಬೆಲೆ 27.70 ಲಕ್ಷ ರೂ. ಇದೆ. ಚೀನಾದಿಂದ ಭಾರತಕ್ಕೆ ಬಂದ ವೆಚ್ಚ, ಆಮದು ಸುಂಕ ವಿಧಿಸಿದ ಬಳಿಕ ಈ ಕಾರಿನ ದರ ಎಷ್ಟಿರಬಹುದು ಎನ್ನುವುದು ಅಧಿಕೃತವಾಗಿ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಟೆಸ್ಲಾ ಕಾರಿನ ಬೆಲೆ 40 ಲಕ್ಷ ರೂ.ಗಿಂತ ಕಡಿಮೆ ಇರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.

model y is SUV TESLA Elon Musk 2

ಹೊಸ ಇವಿ ನೀತಿಯಲ್ಲಿ ಏನಿದೆ?
ಅಟೋ ಕಂಪನಿಗಳು ಭಾರತದಲ್ಲೇ ಉತ್ಪದನಾ ಘಟಕ ತೆರೆಯಬೇಕು ಎನ್ನುವುದು ಕೇಂದ್ರ ಸರ್ಕಾರದ ವಾದವಾಗಿತ್ತು. ಆದರೆ ಈಗ ಈ ನೀತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿದೆ. ಭಾರತದ 2024 ರಲ್ಲಿ ಹೊಸ ಎಲೆಕ್ಟ್ರಿಕ್‌ ವಾಹನ ನೀತಿಯನ್ನು ಅಳವಡಿಸಿದೆ. ಈ ನೀತಿಯ ಪ್ರಕಾರ ಯಾವುದಾದರು ಕಂಪನಿ ಭಾರತದಲ್ಲಿ 4,150 ಕೋಟಿ ರೂ. ಹೂಡಿಕೆ ಮಾಡಿದರೆ ಆ ಕಂಪನಿಯ 35 ಸಾವಿರ ಡಾಲರ್‌ ಅಥವಾ 30 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಕಾರುಗಳ ಮೇಲೆ ಸುಂಕ ರಿಯಾಯಿತಿಗಳನ್ನು ಪಡೆಯಬಹುದು. ಈ ನೀತಿಯ ಅನ್ವಯ ವರ್ಷಕ್ಕೆ 8,000 ಕಾರುಗಳ ಮೇಲೆ 15% ಸುಂಕ ವಿಧಿಸಲಾಗುತ್ತದೆ.

ಹೊಸ ಎಲೆಕ್ಟ್ರಿಕಲ್‌ ಕಾರು ನೀತಿಯಲ್ಲಿ ಕೆಲ ಷರತ್ತು ಸಹ ಇದೆ. ಕಂಪನಿಯು ಕಾರ್ಯಾಚರಣೆಯ ಮೂರನೇ ವರ್ಷದ ವೇಳೆಗೆ ಭಾರತದಲ್ಲಿ ಕಾರುಗಳನ್ನು ತಯಾರಿಸಲು ಪ್ರಾರಂಭಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಈ ಯೋಜನೆಯಡಿಯಲ್ಲಿ ಕಂಪನಿಯು ಅನುಮೋದನೆ ಪಡೆದರೆ ರಿಯಾಯಿತಿ ದರದ 15% ಸುಂಕ ಮತ್ತು 5% ಜಿಎಸ್‌ಟಿ ಹಾಕಲಾಗುತ್ತದೆ. ಅಂದರೆ 35 ಸಾವಿರ ಡಾಲರ್‌ ಕಾರಿನ ಬೆಲೆ ಸುಮಾರು 36 ಲಕ್ಷ ರೂ. ಆದರೆ ಆಮದು ಮಾಡಿದ 50 ಸಾವಿರ ಡಾಲರ್‌ ಕಾರಿನ ಬೆಲೆಗೆ 52 ಲಕ್ಷ ರೂ. ಆಗಲಿದೆ.

 

Share This Article