InternationalLatestLeading NewsMain PostTech

3.36 ಲಕ್ಷ ಕೋಟಿಗೆ ಟ್ವಿಟ್ಟರ್‌ ಡೀಲ್‌ ಮಾಡಿದ ಎಲಾನ್‌ ಮಸ್ಕ್‌

ವಾಷಿಂಗ್ಟನ್‌: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ ಖ್ಯಾತಿಯ ಉದ್ಯಮಿ ಎಲಾನ್ ಮಸ್ಕ್ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ ಅನ್ನು 3.36 ಲಕ್ಷ ಕೋಟಿಗೆ (44 ಬಿಲಿಯನ್‌ ಡಾಲರ್) ಖರೀದಿಸಿದ್ದಾರೆ.

ಎಲಾನ್‌ ಮಸ್ಕ್‌ ಅವರು ಟ್ವಿಟ್ಟರ್‌ನಲ್ಲಿ ಶೇ.9.2ರಷ್ಟು ಷೇರು ಹೊಂದಿದ್ದರು. ನಂತರ ಪ್ರತಿ ಷೇರಿಗೆ 54.20 ಡಾಲರ್‌ (4,149) ನಂತೆ ಪಾವತಿಸಿ, ಪೂರ್ತಿ ಪಾಲು ಖರೀದಿಗೆ ಇಂಗಿತ ವ್ಯಕ್ತಪಡಿಸಿದ್ದರು. ಮಸ್ಕ್‌ ಖರೀದಿ ಪ್ರಸ್ತಾಪಕ್ಕೆ ಟ್ವಿಟ್ಟರ್‌ ಆಡಳಿತ ಮಂಡಳಿ ಒಪ್ಪಿದೆ. ವ್ಯಾಪಾರಕ್ಕೆ ಅಂತಿಮ ಮುದ್ರೆ ಕೂಡ ಬಿದ್ದಿದೆ. ಇದನ್ನೂ ಓದಿ: ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಕೊನೆಯ ಹಂತದಲ್ಲಿದೆ ಡೀಲ್‌ ಮಾತುಕತೆ

ಏ.14ರಂದು ಎಲಾನ್‌ ಮಸ್ಕ್‌ ಅವರು ಟ್ವಿಟ್ಟರ್‌ ಖರೀದಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಇದೀಗ ಪೂರ್ತಿ ಷೇರು ಖರೀದಿಸಿ, ಕಂಪನಿಯನ್ನೇ ತನ್ನದಾಗಿಸಿಕೊಳ್ಳುವ ಮೂಲಕ ಮಸ್ಕ್‌ ಸುದ್ದಿಯಾಗಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರವೆನ್ನುವುದು ಪ್ರಜಾಪ್ರಭುತ್ವದಲ್ಲಿ ಮಹತ್ವದ್ದು ಮತ್ತು ಟ್ವಿಟರ್, ಇಂದಿನ ಡಿಜಿಟಲ್ ಯುಗದಲ್ಲಿ ಅದಕ್ಕೆ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮಸ್ಕ್‌ ಟ್ವೀಟ್‌ ಮಾಡಿದ್ದರು. ಇದನ್ನೂ ಓದಿ: ಜನರೇ ಎಚ್ಚರವಾಗಿರಿ – ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ನಿಮ್ಮ ಖಾತೆಗೇ ಕನ್ನ

ಟ್ರಂಪ್‌ ಖಾತೆ ಮರಳುತ್ತದೆಯೇ?
ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಮುಂದಿಟ್ಟಿರುವ ಪ್ರಸ್ತಾಪಕ್ಕೆ ಕಂಪನಿಯು ಸಮ್ಮತಿ ಸೂಚಿಸುವ ಬಗ್ಗೆ ವರದಿಯಾಗಿದೆ. ಅದರ ಬೆನ್ನಲ್ಲೇ ರಿಪಬ್ಲಿಕನ್‌ ಪಕ್ಷದ ಸಂಸದರು ‘ಡೊನಾಲ್ಡ್‌ ಟ್ರಂಪ್‌ ಅವರನ್ನು ಮುಕ್ತಗೊಳಿಸಲು ಇದು ಸೂಕ್ತ ಸಮಯ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಿಪಬ್ಲಿಕನ್ಸ್‌ ಟ್ವಿಟರ್‌ ಖಾತೆಯು ಟ್ರಂಪ್‌ ಅವರ ಹೆಸರು ಪ್ರಸ್ತಾಪಿಸಿದೆ. ಎಲಾನ್‌ ಮಸ್ಕ್‌ ಅವರನ್ನು ಟ್ಯಾಗ್‌ ಮಾಡಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಮೇಲೆ ಟ್ವಿಟರ್‌ ನಿರ್ಬಂಧವನ್ನು ಮುಕ್ತಗೊಳಿಸಲು ಇದು ಸಕಾಲ ಎಂದಿದೆ. ಇದನ್ನೂ ಓದಿ: ಮೇ 4 ರಿಂದ ಎಲ್‌ಐಸಿ ಐಪಿಒ?

ಅಮೆರಿಕದ ಕ್ಯಾಪಿಟಲ್‌ ಭವನದಲ್ಲಿ 2021ರ ಜನವರಿ 6ರಂದು ಹಿಂಸಾಚಾರ ಉಂಟಾದ ನಂತರದಲ್ಲಿ ಡೊನಾಲ್ಡ್‌ ಟ್ರಂಪ್‌ ಅವರ ಟ್ವಿಟರ್‌ ಖಾತೆಯನ್ನು ನಿರ್ಬಂಧಿಸಲಾಗಿತ್ತು.

Leave a Reply

Your email address will not be published.

Back to top button