ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲೋನ್ ಮಸ್ಕ್ (Elon Musk) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡಿದ ಬೆನ್ನಲ್ಲೇ ಟೆಸ್ಲಾ (Tesla) ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಮೋದಿ ಅವರನ್ನು ಫಾಲೋ ಮಾಡಿದ ವಿಚಾರ ತಿಳಿಯುತ್ತಿದ್ದಂತೆ ಮಸ್ಕ್ ಬಳಿ ನೆಟ್ಟಿಗರು ಭಾರತದಲ್ಲಿ ಇನ್ನೂ ಯಾಕೆ ಟೆಸ್ಲಾ ಕಾರು ಬಂದಿಲ್ಲ? ಕಾರು ಯಾವಾಗ ಬಿಡುಗಡೆ ಆಗಲಿದೆ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ.
Advertisement
2015ರಲ್ಲಿ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಟೆಸ್ಲಾ ಘಟಕಕ್ಕೆ ಭೇಟಿ ನೀಡಿ ಭಾರತದಲ್ಲೂ ಕಾರು ಉತ್ಪಾದನೆ ಮಾಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ 2016ರಲ್ಲೇ ಟೆಸ್ಲಾ ಭಾರತಕ್ಕೆ ಬರುವುದಾಗಿ ಹೇಳಿತ್ತು. 2020ರ ಅಕ್ಟೋಬರ್‌ನಲ್ಲಿ ಟೆಸ್ಲಾದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಕಂಪನಿಯು 2021ಕ್ಕೆ ಭಾರತಕ್ಕೆ ಕಾಲಿಡಲಿದೆ ಎಂದಿದ್ದರು. ಆದರೆ ಕೇಂದ್ರ ಸರ್ಕಾರ ಮತ್ತು ಟೆಸ್ಲಾ ಕಂಪನಿ ಜೊತೆ ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿರುವ ಕಾರಣ ಭಾರತದಲ್ಲಿ ಇನ್ನೂ ಟೆಸ್ಲಾ ಕಾರು ಬಿಡುಗಡೆಯಾಗಿಲ್ಲ.
Advertisement
ಮಸ್ಕ್ ಪ್ಲ್ಯಾನ್ ಏನು?
ಟೆಸ್ಲಾ ಚೀನಾದಲ್ಲಿ(China) ದೊಡ್ಡ ಫ್ಯಾಕ್ಟರಿ ತೆರೆದಿದ್ದು ಏಷ್ಯಾ ಖಂಡದ ದೇಶಗಳಿಗೆ ಇಲ್ಲಿಂದ ಕಾರುಗಳನ್ನು ರಫ್ತು ಮಾಡಲು ಮುಂದಾಗಿದೆ. ಟೆಸ್ಲಾದ ಈ ನೀತಿಗೆ ಭಾರತ ವಿರೋಧ ವ್ಯಕ್ತಪಡಿಸುತ್ತಿದೆ. ಈ ವಿಚಾರಕ್ಕೆ ಹಿಂದೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಭಾರತದಲ್ಲಿ ಕಾರನ್ನು ಟೆಸ್ಲಾ ಉತ್ಪಾದಿಸಬೇಕು. ಚೀನಾ ದೇಶದಲ್ಲಿ ಉತ್ಪಾದನೆಯಾದ ಕಾರನ್ನು ಭಾರತದಲ್ಲಿ ಮಾರಾಟ ಮಾಡಬಾರದು. ಇಲ್ಲಿ ಘಟಕ ತೆರೆಯಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದ್ದರು.
Advertisement
Advertisement
ಭಾರತದ ವಾದವೇನು?
2020ರ ಜೂನ್ನಲ್ಲಾದ ಗಲ್ವಾನ್ ಘರ್ಷಣೆಯ ಬಳಿಕ ಭಾರತ ಮತ್ತು ಚೀನಾದ ಸಂಬಂಧ ಹಳಸಿದೆ. ಚೀನಾಗೆ ಸ್ಪರ್ಧೆ ನೀಡಲೆಂದೇ ಭಾರತ ಮೇಕ್ ಇನ್ ಇಂಡಿಯಾ (Make In India) ಯೋಜನೆಗೆ ಮತ್ತಷ್ಟು ವೇಗ ನೀಡುತ್ತಿದೆ. ಈ ಕಾರಣಕ್ಕೆ ಕಂಪನಿಗಳು ಭಾರತದಲ್ಲೇ ಉತ್ಪಾದನಾ ಘಟಕಗಳನ್ನು ತೆರೆಯಬೇಕು ಎಂದು ಒತ್ತಡ ಹೇರುತ್ತದೆ. ಎಲೆಕ್ಟ್ರಾನಿಕ್ಸ್ ಉತ್ಪನ್ನ, ಅಟೋಮೊಬೈಲ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಭಾರತ ಉತ್ಪದನಾ ಹಬ್ ಆಗಿ ಬೆಳೆಯಬೇಕು ಎನ್ನುವುದು ಕೇಂದ್ರದ ಕನಸು. ಪ್ರಸ್ತುತ ವಿದೇಶದಲ್ಲಿ ಉತ್ಪಾದನೆಯಾದ ಎಲೆಕ್ಟ್ರಿಕ್ ಕಾರುಗಳ ಮಾರಾಟಕ್ಕೆ ಯಾವುದೇ ಸಮಸ್ಯೆಯಿಲ್ಲ. ಆದರೆ ಬಾರಿ ಆಮದು ಸುಂಕವನ್ನು ಪಾವತಿಸಿದ ಬಳಿಕ ಮಾರಾಟಕ್ಕೆ ಅನುಮತಿ ನೀಡಲಾಗುತ್ತದೆ.
ಆಮದು ಸುಂಕ ಎಷ್ಟು?
ಪ್ರಸ್ತುತ ಮಸ್ಕ್ ಮತ್ತು ಭಾರತ ಸರ್ಕಾರದ ಮಧ್ಯೆ ಅಮದು ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿದೆ. ವಿದೇಶದಿಂದ ಭಾರತಕ್ಕೆ ಬರುವ 40 ಲಕ್ಷ ಡಾಲರ್(ಅಂದಾಜು 30 ಲಕ್ಷ ರೂ.) ಮೌಲ್ಯದ ಎಲೆಕ್ಟ್ರಿಕ್ ವಾಹನಕ್ಕೆ ಶೇ.60 ರಷ್ಟು ತೆರಿಗೆ ವಿಧಿಸಲಾಗುತ್ತದೆ. 40 ಲಕ್ಷ ಡಾಲರ್‌ಗಿಂದ ಹೆಚ್ಚಿನ ಮೌಲ್ಯದ ಎಲೆಕ್ಟ್ರಿಕ್ ವಾಹನಗಳಿಗೆ ಶೇ.100 ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಮಸ್ಕ್ ಈ ಹಿಂದೆ ಹೇಳಿದ್ದೇನು?
ಈ ಹಿಂದೆ 2022ರ ಜನವರಿಯಲ್ಲಿ ಭಾರತೀಯ ಟ್ವಿಟ್ಟರ್ ಬಳಕೆದಾರನೊಬ್ಬನ ಪ್ರಶ್ನೆಗೆ ಎಲೋನ್ ಮಸ್ಕ್ ಪ್ರತಿಕ್ರಿಯೆ ನೀಡುವ ಮೂಲಕ ಟೆಸ್ಲಾ ಕಾರುಗಳನ್ನು ಮಾರಾಟ ಮಾಡುವ ಬಗ್ಗೆ ಅಪ್‍ಡೇಟ್ ನೀಡಿದ್ದರು. ಟೆಸ್ಲಾ ಕಂಪನಿ ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಕಂಪನಿ ಈ ಯೋಜನೆಯ ಕುರಿತಾಗಿ ಸರ್ಕಾರದೊಂದಿಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದರು.
Still working through a lot of challenges with the government
— Elon Musk (@elonmusk) January 12, 2022
ಕರ್ನಾಟಕದಲ್ಲಿ ಸ್ಥಾಪನೆಯಾಗುತ್ತಾ?
ಉದ್ಯಮಿ ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಕಂಪನಿ ಕರ್ನಾಟಕದಲ್ಲಿ (Karnataka) ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು 2021ರಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದರು.
ತುಮಕೂರು ಜಿಲ್ಲೆಯಲ್ಲಿ 7,725 ಕೋಟಿ ರೂ. ವೆಚ್ಚದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನು ತೆರೆಯಲಿದೆ. ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ʼಟೆಸ್ಲಾ ಇಂಡಿಯಾ ಮೋಟಾರ್ಸ್ʼ ಹೆಸರಿನಲ್ಲಿ ಕಂಪನಿಯನ್ನು ನೋಂದಣಿ ಮಾಡುವ ಜೊತೆಗೆ ಮೂರು ನಿರ್ದೇಶಕರನ್ನೂ ನೇಮಿಸಲಾಗಿದೆ ಎಂದು ವರದಿಯಾಗಿತ್ತು. ಇದನ್ನೂ ಓದಿ: ಭಾರತದಲ್ಲಿ ಟ್ವಿಟ್ಟರ್ ತುಂಬಾ ನಿಧಾನ – ಎಲೋನ್ ಮಸ್ಕ್
ಅಮೆರಿಕ ಮತ್ತು ಚೀನಾದಲ್ಲಿನ ಉತ್ಪಾದನಾ ಕೇಂದ್ರಗಳಿಂದ ಆಮದು ಮಾಡಿಕೊಂಡ ಎಲೆಕ್ಟ್ರಿಕ್ ವಾಹನಗಳನ್ನು ದೇಶದಲ್ಲಿ ಮಾರಾಟ ಮಾಡುವ ಮೂಲಕ ಬೇಡಿಕೆಯ ವ್ಯಾಪ್ತಿ-ವಿಸ್ತಾರವನ್ನು ಪರೀಕ್ಷಿಸಲು ಟೆಸ್ಲಾ ಯತ್ನಿಸಿತ್ತು. ಇದಕ್ಕಾಗಿ ಆಮದು ಸುಂಕ ಕಡಿತ ಮಾಡುವಂತೆ ಸರ್ಕಾರದ ಜೊತೆ ಸತತ 1 ವರ್ಷಗಳ ಕಾಲ ಮಾತುಕತೆಯನ್ನೂ ನಡೆಸಿತ್ತು. ಆದರೆ, ಮೇಕ್ ಇನ್ ಇಂಡಿಯಾ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿರುವ ಭಾರತ ಸರ್ಕಾರ ಶೇ.100 ರಷ್ಟು ಸುಂಕ ಕಡಿಮೆ ಮಾಡುವ ಬದಲು ಸ್ಥಳೀಯವಾಗಿಯೇ ಉತ್ಪಾದನೆ ಮಾಡುವಂತೆ ಕಂಪನಿ ಮೇಲೆ ಒತ್ತಡ ಹೇರಿತ್ತು. ಈ ಕಾರಣಗಳಿಂದಾಗಿ ಟೆಸ್ಲಾ ಭಾರತದಿಂದಲೇ ದೂರ ಉಳಿಯಲು ನಿರ್ಧರಿಸಿತ್ತು.
ಪ್ರಸ್ತುತ ವಿಶ್ವದಲ್ಲೇ ಭಾರತದ ದೊಡ್ಡ ಮಾರುಕಟ್ಟೆಯಾಗಿದ್ದು, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಅಷ್ಟೇ ಅಲ್ಲದೇ ಚೀನಾ ಮತ್ತು ಅಮೆರಿಕದ ಸಂಬಂಧ ಮತ್ತಷ್ಟು ಹಾಳಾಗಿದೆ. ಈ ಕಾರಣಕ್ಕೆ ಮಸ್ಕ್ ಭಾರತದಲ್ಲಿ ಟೆಸ್ಲಾ ಘಟಕವನ್ನು ತೆರೆಯಲು ಈಗ ಆಸಕ್ತಿ ತೋರಿದ್ದಾರೆ ಎನ್ನಲಾಗುತ್ತಿದೆ.
ಮಾಡೆಲ್ 3 ಕಾರಿನ ವಿಶೇಷತೆಗಳು ಏನು?
ಇಂದಿನ ವರೆಗೆ ಟೆಸ್ಲಾದಿಂದ ಬಿಡುಗಡೆ ಹೊಂದಿದ ಕಾರುಗಳಲ್ಲಿ ಅತ್ಯಂತ ಒಳ್ಳೆಯ ಮಾದರಿ ಇದಾಗಿದ್ದು, ಈ ಕಾರನ್ನು 2017ರಲ್ಲಿ ವಿಶ್ವದಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ. ವಿಶ್ವದಲ್ಲೇ ಅತೀ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆ ಈ ಕಾರಿಗೆ ಪಡೆದುಕೊಂಡಿದೆ. ಎರಡು ಮಾದರಿಯಲ್ಲಿ ಮಾಡೆಲ್ 3 ಕಾರು ಬಿಡುಗಡೆಯಾಗಿದೆ. ಲಾಂಗ್ ರೇಂಜ್ ಮಾದರಿಯ ಕಾರು ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀ ಕ್ರಮಿಸಿದರೆ, ಸ್ಟಾಡಂರ್ಡ್ ಮಾದರಿಯ ಕಾರು 354 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. 15 ನಿಮಿಷದಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಗರಿಷ್ಟ 162 ಕೀ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ಕಾರಿಗಿದೆ.
ಸ್ಟಾರ್‌ಲಿಂಕ್‌ಗೆ ಅನುಮತಿ ಇಲ್ಲ
ಮಸ್ಕ್ ಅವರ ಸ್ಟಾರ್‌ಲಿಂಕ್ (Starlink) ಕಂಪನಿ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್ ಸೇವೆ ನೀಡಲು ಮುಂದಾಗಿತ್ತು. ಆದರೆ ಕೇಂದ್ರ ಸರ್ಕಾರದ ಜೊತೆಕಂಪನಿ ಈ ಯೋಜನೆ ಜಾರಿ ಸಂಬಂಧ ಯಾವುದೇ ಮಾತುಕತೆ ನಡೆಸಿರಲಿಲ್ಲ. ಹೀಗಾಗಿ ಈ ಸೇವೆ ಆರಂಭಿಸಲು ಅನುಮತಿ ನೀಡುವುದಿಲ್ಲ ಎಂದು ತಿಳಿಸಿತ್ತು.