ನವದೆಹಲಿ: ಹೈಪರ್‌ಲೂಪ್ ಜನಕ ಹಾಗೂ ಸ್ಪೇಸ್-ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ರವರು ಭಾರತಕ್ಕೆ ಬರುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.
ಎಲಾನ್ ಮಸ್ಕ್ ರವರು ಗುರುವಾರ ಚೀನಾ ಪ್ರವಾಸದಲ್ಲಿನ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ವೇಳೆ ಭಾರತೀಯರು ನೀವು ಯಾವಾಗ ಭಾರತಕ್ಕೆ ಬರುವಿರಿ ಎಂದು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಲಾನ್ ಮಸ್ಕ್ 2018ರೊಳಗೆ ಭಾರತಕ್ಕೆ ಭೇಟಿ ನೀಡುವ ಕುರಿತು ಮಾಹಿತಿ ನೀಡಿದ್ದಾರೆ.
ಎಲಾನ್ ಮಸ್ಕ್ ರವರು ಮೂಲತಃ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದವರಾಗಿದ್ದು, ಸದ್ಯ ಅಮೆರಿಕದ ಲಾಸ್ ಎಂಜಲೀಸ್‍ನಲ್ಲಿ ನೆಲೆಸಿದ್ದಾರೆ. ಇವರು ಟೆಸ್ಲಾ ಇಲೆಕ್ಟ್ರಿಕ್ ಕಾರು ಹಾಗೂ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾದ ಸ್ಪೇಸ್ ಎಕ್ಸ್ ನ ಸಂಸ್ಥಾಪಕರಾಗಿದ್ದಾರೆ.
2017ರಲ್ಲಿ ತಮ್ಮ ಟೆಸ್ಲಾ ಸಂಸ್ಥೆಯ ಇಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಪರಿಚಯಿಸುವ ಕುರಿತು ಭಾರತ ಸರ್ಕಾರದೊಂದಿಗೆ ಮಾತನಾಡಿದ್ದರು. ಆದರೆ ಕೇಂದ್ರ ಸರ್ಕಾರದ ನಿಯಮ-ಷರತ್ತುಗಳ ಪ್ರಕ್ರಿಯೆ ವಿಳಂಬವಾದ ಕಾರಣ ಭಾರತದಲ್ಲಿ ಟೆಸ್ಲಾ ಕಾರುಗಳು ತಡವಾಗಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಈ ಹಿಂದೆ ತಿಳಿಸಿದ್ದರು. ಇದನ್ನೂ ಓದಿ: ಮುಂಬೈ ನಿಂದ ಪುಣೆಗೆ ಜಸ್ಟ್ 25 ನಿಮಿಷ ಸಾಕು- ಹೈಪರ್‍ಲೂಪ್ ಪಡೆಯುವಲ್ಲಿ ಭಾರತವೇ ಮೊದಲ ದೇಶವಾಗೋ ನಿರೀಕ್ಷೆ
Prob early next year
— Elon Musk (@elonmusk) July 12, 2018
ಏನಿದು ಹೈಪರ್‌ಲೂಪ್?
ಹೈಪರ್‌ಲೂಪ್ ಮುಂದಿನ ಪೀಳಿಗೆಯ ರೈಲ್ವೇ ವ್ಯವಸ್ಥೆಯಾಗಿದ್ದು, ಅಯಸ್ಕಾಂತಿಯ ಶಕ್ತಿಯಿಂದ ಸಂಚರಿಸುತ್ತದೆ. ಗಂಟೆಗೆ 1126 ಕಿ.ಮೀ ವೇಗ ಇರಲಿದೆ ಎಂದು ನಿರೀಕ್ಷಿಸಬಹುದಾಗಿದೆ. ಕೊಳವೆಯಾಕಾರದ ಈ ವಾಹನ ಶಬ್ದದ ವೇಗದಲ್ಲಿ ಚಲಿಸಲಿದೆ ಎಂದು ವರದಿಯಾಗಿದೆ. ಪ್ರಸ್ತುತ ಭಾರತದಲ್ಲಿ ಅತ್ಯಂತ ವೇಗದ ರೈಲು ಟಾಲ್ಗೋ ಗಂಟೆಗೆ 180 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ. ಆದ್ರೆ ಇದು ಇನ್ನೂ ಪರೀಕ್ಷಾರ್ಥ ಸಂಚಾರದಡಿ ಇದೆ.
ಲಾಭ ಏನು?
ಪ್ರಸ್ತಾವಿತ 149 ಕಿಮಿ ಇರೋ ಪುಣೆ-ಮುಂಬೈ ಮಾರ್ಗಕ್ಕೆ ಬರೋದಾದ್ರೆ ಇದು ಪುಣೆ, ನವೀಮುಂಬೈ ಅಂತರಾಷ್ಟ್ರಿಯ ವಿಮಾನ ನಿಲ್ದಾಣ ಹಾಗೂ ಮುಂಬೈ ನಗರಗಳನ್ನ ಸಂಪರ್ಕಿಸಲಿದ್ದು, 25 ನಿಮಿಷ ಪ್ರಯಾಣ ಸಮಯ ಇರಲಿದೆ. ರಿಚರ್ಡ್ ಬ್ರಾನ್ಸನ್ ಅವರ ಪ್ರಕಾರ ಈ ವ್ಯವಸ್ಥೆಯಿಂದ 2.6 ಕೋಟಿ ಜನರಿಗೆ ನೆರವಾಗಲಿದ್ದು, 9 ಕೋಟಿ ಗಂಟೆಗೂ ಹೆಚ್ಚು ಪ್ರಯಾಣ ಸಮಯ ಉಳಿತಾಯವಾಗಲಿದೆ. ಮಾರ್ಗವು ಸಂಪುರ್ಣವಾಗಿ ವಿದ್ಯುತ್ ಶಕ್ತಿಯಿಂದ ಕೂಡಿರಲಿದ್ದು, ವರ್ಷಕ್ಕೆ 1.5 ಲಕ್ಷ ಟನ್‍ನಷ್ಟು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನ ಕಡಿಮೆ ಮಾಡಲಿದೆ.