– ಚರ್ಮದ ಚೀಲದಲ್ಲಿ ನೀರೋಕಳಿ ಆಟ
ಯಾದಗಿರಿ: ಹೋಳಿ ಹುಣ್ಣಿಮೆಗೆ ಅಥವಾ ಯುಗಾದಿ ಹಬ್ಬ ಸಂದರ್ಭದಲ್ಲಿ ಬಣ್ಣದೊಕಳಿ ಆಡುವುದು ಸಾಮಾನ್ಯ. ಆದರೆ ಜಿಲ್ಲೆಯ ಶಹಪುರ ತಾಲೂಕಿನ ಸಗರ ಗ್ರಾಮದಲ್ಲಿ ಎಳ್ಳು ಅಮಾವಾಸ್ಯೆಯಂದು ಸಹ ಓಕಳಿ ಆಡಲಾಗುತ್ತದೆ. ಆದರೆ ಇದು ಬಣ್ಣದ ಓಕಳಿಯಲ್ಲ, ನೀರಿನ ಓಕಳಿ.
ಈ ಗ್ರಾಮದಲ್ಲಿ ವರ್ಷಕ್ಕೊಮ್ಮೆ ನಡೆಯುವ ವಿಶಿಷ್ಟ ಆಚರಣೆ ಗ್ರಾಮಸ್ಥರಿಗೆ ಬಹು ದೊಡ್ಡ ಹಬ್ಬವಾಗಿದೆ. ಈ ಹಬ್ಬದ ಇನ್ನೊಂದು ವಿಶೇಷ ಎಂದರೆ ನೀರಿನ ಓಕಳಿ ಆಡಲು ಚರ್ಮ ಚೀಲ ಉಪಯೋಗಿಸಲಾಗುತ್ತದೆ.
Advertisement
Advertisement
ಉತ್ತರ ಕರ್ನಾಟಕದಲ್ಲಿ ಎಳ್ಳು ಅಮವಾಸ್ಯೆ ಎಂದರೆ ಭೂಮಿ ತಾಯಿಗೆ ಬಾಗಿನ ಕೊಡುವ ಹಬ್ಬವೆಂದೇ ಪ್ರಸಿದ್ಧ. ಈ ದಿನ ಸಗರ ಗ್ರಾಮದಲ್ಲಿ ರೈತಾಪಿ ವರ್ಗ ಇನ್ನಷ್ಟು ವಿಶೇಷವಾಗಿ ಈ ಹಬ್ಬವನ್ನು ಆಚರಿಸುತ್ತದೆ. ಗ್ರಾಮದ ಹನುಮಂತ ದೇವರ ಮೂರ್ತಿಯನ್ನು ಗಂಗಾ ಸ್ಥಳಕ್ಕೆ ತೆಗೆದುಕೊಂಡು ಹೋಗಿ, ಗಂಗಾ ಪೂಜೆಯ ಬಳಿಕ ಮತ್ತೆ ಮರಳಿ ದೇವಸ್ಥಾನಕ್ಕೆ ದೇವರ ಮೂರ್ತಿಯನ್ನು ಕರೆತರುವಾಗ, ಈ ನೀರೋಕಳಿಯನ್ನು ಆಡಲಾಗುತ್ತದೆ. ಪ್ರಾಣಿಗಳ ಚರ್ಮದಿಂದ ಮಾಡಿದ ಚೀಲದಲ್ಲಿ ನೀರು ತುಂಬಿಕೊಂಡು ಮಾರ್ಗದ ಉದ್ದಕ್ಕೂ ಓಕಳಿ ಆಡುತ್ತಾರೆ. ಇದು ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ.