ಎಲ್ಲೋ ಜೋಗಪ್ಪ ನಿನ್ನರಮನೆ ಟ್ರೈಲರ್‌ನಲ್ಲಿ ಭಿನ್ನ ಕಥನದ ಸುಳಿವು!

Public TV
2 Min Read
ello jogappa ninna aramane

ಟೈಟಲ್ ಲಾಂಚ್ ಆದ ಘಳಿಗೆಯಿಂದಲೇ ಕುತೂಹಲ ಮೂಡಿಸಿದ್ದ ಚಿತ್ರ `ಎಲ್ಲೋ ಜೋಗಪ್ಪ ನಿನ್ನರಮನೆ’ (Ello Jogappa Ninna Aramane). ಈಗಾಗಲೇ ಕಿರುತೆರೆಯಲ್ಲಿ ಅನೇಕ ಹಿಟ್ ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ಹಯವದನ ನಿರ್ದೇಶನ ಮೊದಲ ಚಿತ್ರವಿದು. ಕಿರುತೆರೆ ಮೂಲಕವೇ ಪ್ರೇಕ್ಷಕರ ನಾಡಿ ಮಿಡಿತ ಅರಿತುಕೊಂಡಿರುವ ಹಯವದನ ಅವರ ನಿರ್ದೇಶನದ ಮೇಲೆ ಸಹಜವಾಗಿಯೇ ಕುತೂಹಲಗಳಿದ್ದವು. ಆ ಬಳಿಕ ಒಂದೆರಡು ಹಾಡುಗಳು ಬಿಡುಗಡೆಗೊಂಡು ಜನಮನ ಸೆಳೆದುಕೊಂಡಿದ್ದವು. ಇದೀಗ ಫೆಬ್ರವರಿ 21 ರಂದು ಬಿಡುಗಡೆಗೊಳ್ಳಲು ತಯಾರಾಗಿರುವ ಈ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ.

Ello Jogappa Ninna Aramane 1

ಯಾವುದೇ ಟ್ರೈಲರ್‌ಗಳನ್ನು ನೋಡಿದಾಗ ಅಪ್ರಜ್ಞಾಪೂರ್ವಕವಾಗೊಂದು ಆಹ್ಲಾದ ನೋಡುಗರಲ್ಲಿ ಮೂಡಿಕೊಳ್ಳೋದು ವಿರಳ. ಹಾಗೊಂದು ಭಾವ ಮೂಡಿಸಿದ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಯಶ ಕಂಡ ಅನೇಕ ಉದಾಹರಣೆಗಳಿದ್ದಾವೆ. ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದ ಟ್ರೈಲರಿನಲ್ಲಿಯೂ ಅಂಥಾದ್ದೊಂದು ಆಹ್ಲಾದ ಸ್ಪಷ್ಟವಾಗಿ ಕಾಣ ಸಿಗುವಂತಿದೆ. ಅಲೆಮಾರಿಯೊಬ್ಬನ ಯಾನದ ಹಾದಿಯ ರೋಚಕ ಕಥನದ ಸುಳಿವೂ ಈ ಮೂಲಕವೇ ದಾಟಿಕೊಂಡಿದೆ. ಅದರಲ್ಲಿಯೂ ವಿಶೇಷವಾಗಿ ಮೌಂಟ್ ಎವರೆಸ್ಟಿನ ಹಿಮಚ್ಚಾದಿತ ಸುಂದರ ಪರಿಸರದಿಂದ ಈ ಟ್ರೈಲರ್ ತೆರೆದುಕೊಂಡಿದೆ. ಆ ನಂತರದ ದೃಶ್ಯಗಳಲ್ಲಿ, ಆ ಮೂಲಕ ಜಾಹೀರಾದ ಕಥೆಯ ಸುಳಿವುಗಳಲ್ಲಿಯೂ ಅದೇ ತೀವ್ರತೆಯ ಸೆಳೆತ ಸದರಿ ಟ್ರೈಲರಿನ ನಿಜವಾದ ಪ್ಲಸ್ ಪಾಯಿಂಟ್.

Ello Jogappa Ninna Aramane 2

ಈ ಹಿಂದೆ ಕಂಬ್ಳಿ ಹುಳ ಚಿತ್ರದ ಮೂಲಕ ಗಮನ ಸೆಳೆದಿದ್ದ ಅಚಿಜನ್ ನಾಗೇಂದ್ರ ಈ ಚಿತ್ರದ ನಾಯಕನಾಗಿ, ನಾನಾ ಚಹರೆಗಳಿರುವ ಪಾತ್ರದಲ್ಲಿ ನಟಿಸಿದ್ದಾರೆ. ವೆನ್ಯಾ ರೈ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಸಂಜನಾ ದಾಸ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಶರತ್ ಲೋಹಿತಾಶ್ವ, ದಾನಪ್ಪ, ದಿನೇಶ್ ಮಂಗಳೂರು, ಸ್ವಾತಿ ಬಿರಾದಾರ್, ಲಕ್ಷ್ಮಿ, ನಾಡಗೌಡ, ರೇಖಾ ರಾವ್, ಇಳಾ ವಿಟ್ಲ ಮುಂತಾದವರು ಮಹತ್ವದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ಎಲ್ಲ ಪಾತ್ರಗಳು ಕೂಡಾ ಈ ಟ್ರೈಲರ್ ಮೂಲಕ ಪರಿಚಯಗೊಂಡಿವೆ. ಎಲ್ಲರ ಬದುಕಿಗೂ ಹತ್ತಿರಾಗಬಲ್ಲ, ನೋಡುಗರನ್ನೆಲ್ಲ ಕಾಡ ಬಲ್ಲ, ಕಾಮಿಡಿ, ಲವ್, ಸೆಂಟಿಮೆಂಟ್ ಸೇರಿದಂತೆ ಎಲ್ಲ ಗುಣಗಳನ್ನೂ ಒಳಗೊಂಡಿರುವ ಈ ಟ್ರೈಲರ್ ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಕಿರುತೆರೆಯಲ್ಲಿ ಸೂಪರ್ ಹಿಟ್ ಅನ್ನಿಸಿಕೊಂಡಿದ್ದ ಅಗ್ನಿ ಸಾಕ್ಷಿ, ನಾಗಿಣಿಯಂಥಾ ಧಾರಾವಾಹಿಗಳನ್ನು ನಿರ್ದೇಶಿಸಿ ಸೈ ಅನ್ನಿಸಿಕೊಂಡಿದ್ದವರು ಹಯವದನ. ಅವರು ಹಲವಾರು ವರ್ಷಗಳ ಕಾಲ ತಯಾರಿ ನಡೆಸಿ, ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಆಗಮಿಸಿದ್ದಾರೆ. ಇಲ್ಲಿ ತಂದೆ ಮಗನ ಬಾಂಧವ್ಯವೂ ಸೇರಿದಂತೆ ಅನೇಕ ಗುಣಗಳನ್ನು ಹೊಂದಿರುವ ಕಥೆಯಿದೆಯಂತೆ. ಈ ಟ್ರೈಲರ್ ಮೂಲಕ ಒಟ್ಟಾರೆ ಸಿನಿಮಾದತ್ತ ಸೆಳೆತ ಮೂಡಿಸುವಂಥಾ ಅಂಶಗಳು ಜಾಹೀರಾಗಿವೆ. ಪವನ್ ಶಿಮಿಕೇರಿ ಮತ್ತು ಸಿಂಧು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಟರಾಜು ಮದ್ದಾಲ ಛಾಯಾಗ್ರಹಣ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಶಿವಪ್ರಸಾದ್ ಸಂಗೀತ ನಿರ್ದೇಶನದೊಂದಿಗೆ ಈ ಚಿತ್ರ ಮೂಡಿ ಬಂದಿದೆ.

Share This Article