ಎಲ್ಲಿದ್ದೆ ಇಲ್ಲಿತನಕ: ಗೆಳೆಯನ ಚಿತ್ರದ ಟ್ರೇಲರ್ ಲಾಂಚ್ ಮಾಡಿದರು ದರ್ಶನ್!

Public TV
1 Min Read
Ellidde Illitanaka

ಬೆಂಗಳೂರು: ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅಭಿನಯಿಸಿರೋ ಎಲ್ಲಿದ್ದೆ ಇಲ್ಲಿತನಕ ಚಿತ್ರ ಹಾಡುಗಳ ಮೂಲಕವೇ ಮೆಲೋಡಿ ಹಿಮ್ಮೇಳದೊಂದಿಗೆ ಪ್ರೇಕ್ಷಕರನ್ನೆಲ್ಲ ತಲುಪಿಕೊಂಡಿತ್ತು. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದರ ಟ್ರೇಲರ್ ಬಿಡುಗಡೆಗೊಳಿಸಿದ್ದಾರೆ. ಗೆಳೆಯ ಸೃಜನ್ ಲೋಕೇಶ್ ಸಿನಿಮಾ ಯಾನಕ್ಕೆ ಸದಾ ಬೆಂಬಲಿಸುತ್ತಾ ಬಂದಿರುವ ದರ್ಶನ್, ಈ ಟ್ರೇಲರ್ ಬಿಡುಗಡೆಗೊಳಿಸಿ ಶುಭ ಕೋರಿದ್ದಾರೆ. ಅದನ್ನು ಮೆಚ್ಚಿಕೊಂಡೂ ಮಾತಾಡಿದ್ದಾರೆ. ಹೀಗೆ ಹೊರ ಬಂದಿರೋ ಟ್ರೇಲರ್ ಮನೋರಂಜನೆ, ಪ್ರೀತಿ, ಫ್ಯಾಮಿಲಿ ಸೆಂಟಿಮೆಂಟ್ ಮಿಳಿತವಾದ ಕಥೆಯ ಸುಳಿವು ನೀಡುತ್ತಲೇ ಹೆಚ್ಚಿನ ವೀಕ್ಷಣೆ ಮತ್ತು ಪ್ರತಿಕ್ರಿಯೆಗಳನ್ನೂ ಪಡೆದುಕೊಳ್ಳುತ್ತಿದೆ.

Ellidde Illi Tanaka 7

ತೇಜಸ್ವಿ ನಿರ್ದೇಶನದ ಎಲ್ಲಿದ್ದೆ ಇಲ್ಲಿತನಕ ಹಾಡುಗಳೊಂದಿಗೇ ಜನರನ್ನು ಸೆಳೆಯುತ್ತಿದೆ. ಇತ್ತೀಚೆಗಷ್ಟೇ ರೊಮ್ಯಾಂಟಿಕ್ ಆಗಿರೋ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿತ್ತು. ಅದು ದಾಖಲೆ ಮಟ್ಟದ ವೀಕ್ಷಣೆಗಳೊಂದಿಗೆ ಸೂಪರ್ ಹಿಟ್ ಆಗುತ್ತಲೇ ಅದರ ಬೆನ್ನಿಗೇ ಇದೀಗ ಟ್ರೇಲರ್ ಬಿಡುಗಡೆಯಾಗಿದೆ. ಮಜವಾದ ಕಥೆ, ರಿಚ್ ಆಗಿ ಮೂಡಿ ಬಂದಿರೋ ಮೇಕಿಂಗ್‍ನ ಲಕ್ಷಣಗಳನ್ನು ಕಾಣಿಸುತ್ತಲೇ ಸದರಿ ಟ್ರೇಲರ್ ಪ್ರಾಮಿಸಿಂಗ್ ಆಗಿ ಮೂಡಿ ಬಂದಿದೆ.

Ellidde Illi Tanaka 2

ಎಲ್ಲಿದ್ದೆ ಇಲ್ಲಿತನಕ ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಮೂಡಿ ಬಂದಿದೆ. ತೇಜಸ್ವಿ ನಿರ್ದೇಶನ ಮಾಡಿರೋ ಈ ಚಿತ್ರದಲ್ಲಿ ತಾರಾ ಅಮ್ಮನಾಗಿ ನಟಿಸಿದರೆ, ಸಾಧು ಕೋಕಿಲಾ, ಸಿಹಿಕಹಿ ಚಂದ್ರು, ತರಂಗ ವಿಶ್ವ ಮುಂತಾದವರ ಅದ್ಧೂರಿ ತಾರಾಗಣವಿದೆ. ಹರಿಪ್ರಿಯಾ ಮತ್ತು ಸೃಜನ್ ಹಾಡಿನಲ್ಲಿ ಕಂಡುಬಂದಂಥಾದ್ದೇ ರೊಮ್ಯಾಂಟಿಕ್ ಮೂಡಿನಲ್ಲಿ ಚಿತ್ರದುದ್ದಕ್ಕೂ ಕಾಣಿಸಿಕೊಂಡಿದ್ದಾರೆಂದು ಕೂಡಾ ಈ ಟ್ರೇಲರ್ ಮೂಲಕವೇ ಸಾಬೀತಾಗಿದೆ. ಸೃಜನ್ ಅಂದರೆ ಕಚಗುಳಿ ಇಡೋ ಮಾತು ಮತ್ತು ಹಾಸ್ಯಕ್ಕೆ ಹೆಸರಾಗಿರುವವರು. ಈ ಚಿತ್ರದಲ್ಲಿ ಅಂಥಾ ಹಾಸ್ಯದೊಂದಿಗೇ, ಪ್ರೀತಿ, ಕೌಟುಂಬಿಕ ಕಥೆಯೂ ಇದೆ. ಇದೆಲ್ಲದರೊಂದಿಗೆ ಭರ್ಜರಿ ಮನೋರಂಜನೆಯನ್ನೇ ಉದ್ದೇಶವಾಗಿಸಿಕೊಂಡಿರೋ ಈ ಚಿತ್ರ ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *