ಬೆಂಗಳೂರು: ಮಜಾ ಟಾಕೀಸ್ ಮೂಲಕ ಮನೋರಂಜನೆ ನೀಡುತ್ತಲೇ ಟಾಕಿಂಗ್ ಸ್ಟಾರ್ ಎಂಬ ಬಿರುದನ್ನೂ ತಮ್ಮದಾಗಿಸಿಕೊಂಡಿರುವವರು ಸೃಜನ್ ಲೋಕೇಶ್. ಈ ಕಿರುತೆರೆ ಶೋ ಮೂಲಕವೇ ಪ್ರಸಿದ್ಧಿ ಪಡೆದುಕೊಂಡಿರೋ ಅವರೀಗ ಒಂದಷ್ಟು ಕಾಲದ ನಂತರ ‘ಎಲ್ಲಿದ್ದೆ ಇಲ್ಲಿತನಕ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಮೂಡಿ ಬಂದಿರೋ ಈ ಚಿತ್ರದ ಟೀಸರ್ ಮತ್ತು ಟೈಟಲ್ ಟ್ರ್ಯಾಕ್‍ಗಳು ಈಗಾಗಲೇ ಹೊರಬಂದು ಹಿಟ್ ಆಗಿವೆ. ಇದೀಗ ಸೃಜಾ ಸ್ಪೆಷಲ್ ಅನ್ನಬಹುದಾದ ಸ್ಪೆಷಲ್ ಲಿರಿಕಲ್ ವೀಡಿಯೋವೊಂದು ಬಿಡುಗಡೆಯಾಗಿದೆ.
ನೀ ನಗೆ ಹಂಚಿ ಮಿಂಚುವಾ ನಮ್ಮ ಕನ್ನಡದವ ಎಂಬ ಈ ಹಾಡು ನಾಯಕ ಸೃಜನ್ ಲೋಕೇಶ್ ಅವರ ಬಗ್ಗೆ ರಚಿಸಿರೋ ಸಾಹಿತ್ಯದ ಸಾಲುಗಳನ್ನೊಳಗೊಂಡಿದೆ. ಭರ್ಜರಿ ಚೇತನ್ ಕುಮಾರ್ ಬರೆದಿರೋ ಈ ಹಾಡಿಗೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಸಂತೋಷ್ ವೆಂಕಿ ಹಾಡಿದ್ದಾರೆ. ಈ ಮೂಲಕವೇ ಎಲ್ಲಿದ್ದೆ ಇಲ್ಲಿತನಕ ಚಿತ್ರದಲ್ಲಿ ಸೃಜನ್ ಗೆಟಪ್ಪುಗಳ ಝಲಕ್‍ಗಳೂ ಕೂಡಾ ಅನಾವರಣಗೊಂಡಿವೆ. ಇದು ಮಜಾ ಟಾಕೀಸ್‍ಗಿಂತಲೂ ಮುಂಚೆಯೇ ನಿರ್ದೇಶನ ವಿಭಾಗದಲ್ಲಿ ಸೃಜನ್ ತಂಡದಲ್ಲಿ ಗುರುತಿಸಿಕೊಂಡಿದ್ದ ತೇಜಸ್ವಿ ನಿರ್ದೇಶನದ ಚಿತ್ರ. ಇದುವರೆಗೂ ನೂರಾರು ಎಪಿಸೋಡುಗಳ ಧಾರಾವಾಹಿ, ಕಿರುತೆರೆ ರಿಯಾಲಿಟಿ ಶೋಗಳನ್ನು ನಿರ್ದೇಶನ ಮಾಡಿರೋ ತೇಜಸ್ವಿ ಸೃಜನ್ ಅವರಿಗೆ ಪಕ್ಕಾ ಹೊಂದಿಕೆಯಾಗೋ ಕಥೆಯೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಎಲ್ಲಿದ್ದೆ ಇಲ್ಲಿ ತನಕ ಹಲವಾರು ವರ್ಷಗಳ ತಯಾರಿಯೊಂದಿಗೆ ರೂಪುಗೊಂಡಿರೋ ಚಿತ್ರ. ಈ ಮೂಲಕ ಹರಿಪ್ರಿಯಾ ಸೃಜನ್‍ಗೆ ಜೋಡಿಯಾಗಿ ನಟಿಸಿದ್ದಾರೆ. ಹರಿಪ್ರಿಯಾ ಕೂಡ ಇಲ್ಲಿ ವಿಶೇಷವಾದ ಗೆಟಪ್ಪಿನಲ್ಲಿ, ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರಂತೆ. ಆಕ್ಷನ್, ಕಾಮಿಡಿ, ಫ್ಯಾಮಿಲಿ ಸಬ್ಜೆಕ್ಟ್ ಸೇರಿದಂತೆ ಎಲ್ಲ ಅಂಶಗಳನ್ನೂ ಹದವಾಗಿ ಬರೆಸಿದ ಮಜವಾದ ಕಥೆ ಈ ಚಿತ್ರದಲ್ಲಿದೆಯಂತೆ. ಟಾಕಿಂಗ್ ಸ್ಟಾರ್ ಈ ಸಿನಿಮಾ ಮೂಲಕ ನಾಯಕ ನಟನಾಗಿಯೂ ಭರ್ಜರಿ ಗೆಲುವು ದಕ್ಕಿಸಿಕೊಳ್ಳುವ ಉತ್ಸಾಹದಿಂದಿದ್ದಾರೆ.