ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುದುಗೂರು ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಈ ಪ್ರದೇಶದ ಸುಮಾರು 20ಕ್ಕೂ ಹೆಚ್ಚು ಎಕರೆಯಷ್ಟು ಪ್ರದೇಶದಲ್ಲಿ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆಯನ್ನು ಕಾಡಾನೆಗಳು ನಾಶಪಡಿಸಿವೆ.
ರೈತರಾದ ಅಚ್ಚಯ್ಯ, ಸಣ್ಣಪ್ಪ, ಜವರೇಗೌಡ, ಬಸಪ್ಪ, ಚಿನ್ನಣ್ಣ ಸೇರಿದಂತೆ 25 ಕ್ಕೂ ಹೆಚ್ಚು ರೈತರ ಭತ್ತದ ಬೆಳೆಯನ್ನು ಕಾಡಾನೆಗಳು ನಾಶ ಮಾಡಿವೆ. ಇವಷ್ಟೆ ಅಲ್ಲದೆ ಕೆಸ, ಶುಂಠಿ, ತೆಂಗು, ಬಾಳೆ, ಅಡಿಕೆ ಬೆಳೆಗಳನ್ನು ಕೂಡ ನಾಶ ಪಡಿಸಿವೆ.
Advertisement
Advertisement
ಹಲವಾರು ಬಾರಿ ಅರಣ್ಯ ಇಲಾಖೆಗೆ ಕಾಡಾನೆ ಹಾವಳಿಯನ್ನು ನಿಯಂತ್ರಿಸುವಂತೆ ರೈತರು, ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಒಂದು ಬದಿಯಲ್ಲಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕಾಯುತ್ತಿದೆ. ಆದರೆ ಮತ್ತೊಂದು ಕಡೆಯಿಂದ ಕಾಡಾನೆ ಹಿಂಡು ಅರಣ್ಯ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ಗ್ರಾಮಗಳತ್ತ ಬರುತ್ತಿವೆ.
Advertisement
ಹೀಗಾಗಿ ಕಾಡಾನೆ ಹಾವಳಿಯನ್ನು ವಿರೋಧಿಸಿ ನಾಲ್ಕು ಗ್ರಾಮಗಳ ನೂರಾರು ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಡಾನೆ ದಾಳಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಅರಣ್ಯ ಇಲಾಖೆಗೆ ರೈತರು ಎಚ್ಚರಿಕೆ ನೀಡಿದ್ದಾರೆ.