Chikkamagaluru

ಕಾಡಾನೆಗಳನ್ನು ಸ್ಥಳಾಂತರಿಸಿ, ಇಲ್ಲವೇ ನಮ್ಮನ್ನೇ ಸ್ಥಳಾಂತರಿಸಿ- ಸರ್ಕಾರಕ್ಕೆ ಮಲೆನಾಡಿಗರ ಆಗ್ರಹ

Published

on

Share this

ಚಿಕ್ಕಮಗಳೂರು: ಕಾಡಾನೆಗಳನ್ನು ಸ್ಥಳಾಂತರಿಸಿ, ಇಲ್ಲವೇ ಬೇರೆ ಭೂಮಿ ಕೊಡಿ, ನಾವು ಬೇರೆ ಕಡೆ ಹೋಗಿ ಬದುಕು ಕಟ್ಟಿಕೊಳ್ಳುತ್ತೇವೆ ಎಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮೂಲರಹಳ್ಳಿ, ಗುತ್ತಿ, ಭೈರಾಪುರ, ಊರಬಗೆ ಗ್ರಾಮದ ಜನ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕಳೆದೊಂದು ವಾರದಿಂದ ಮೂರು ಕಾಡಾನೆಗಳು ಹೊಲ-ಗದ್ದೆ, ತೋಟದಲ್ಲಿ ದಾಂಧಲೆ ನಡೆಸುತ್ತಿವೆ. ಬೆಳೆಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಅಡಿಕೆ, ಕಾಫಿ, ಮೆಣಸು, ಬಾಳೆ ಸಂಪೂರ್ಣ ನೆಲಕಚ್ಚುತ್ತಿದೆ. ಹೀಗೇ ಆದರೆ ಬದುಕುವುದಾದರೂ ಹೇಗೆ ಎಂದು ಅರಣ್ಯ ಇಲಾಖೆಗೆ ಪ್ರಶ್ನಿಸಿರುವ ಸ್ಥಳಿಯರು, ಕಾಡಾನೆಗಳನ್ನು ಸ್ಥಳಾಂತರಿಸಿ, ಇಲ್ಲವೇ ನಮ್ಮನ್ನೇ ಸ್ಥಳಾಂತರಿಸಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸೋನು ಸೂದ್ ಕಚೇರಿ ಮೇಲೆ ಐಟಿ ದಾಳಿ

ಮೂರು ದಿನಗಳಿಂದ ಕಾಡಾನೆಗಳು ನಿರಂತರ ದಾಳಿ ಮಾಡುತ್ತಿರುವುದರಿಂದ ಲಕ್ಷಾಂತರ ಮೌಲ್ಯದ ಬೆಳೆಗಳು ನಾಶವಾಗಿವೆ. ಕಳೆದ ಒಂದೆರಡು ದಶಕಗಳಿಂದ ಕಾಡಂಚಿನ ಗ್ರಾಮದ ಜನ ಆನೆ ಹಾವಳಿಯಿಂದ ಬಸವಳಿದಿದ್ದಾರೆ. ನಾಲ್ಕೈದು ವರ್ಷಗಳಿಂದ ನಿರಂತರ ಆನೆ ಹಾವಳಿಯಿಂದ ಮಲೆನಾಡಿಗರು ಕಂಗಾಲಾಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಆನೆ ಹಾವಳಿಯಿಂದ ಈಗಾಗಲೇ ನಾಲ್ಕೈದು ಜನ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಇಷ್ಟು ದಿನ ಹೊಲಗದ್ದೆ, ತೋಟಗಳಲ್ಲಿದ್ದ ಆನೆಗಳು ಈಗೀಗ ನಾಡಿಗೂ ಬರುತ್ತಿರುವುದರಿಂದ ಹಳ್ಳಿಗರು ಭಯಗೊಂಡಿದ್ದಾರೆ. ಆನೆಗಳು ಕಂಡಾಕ್ಷಣ ಅರಣ್ಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರೂ ಅವರು ಬರೋದು ಒಂದೆರಡು ಗಂಟೆಯ ಬಳಿಕವೇ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸರ್ಕಾರ ನಮ್ಮ ನೋವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಕಾಡಾನೆ ಹಾಗೂ ಕಾಡು ಪ್ರಾಣಗಳಿಂದ ರೈತರು ಬೆಳೆ ಕಳೆದುಕೊಂಡಾಗ ಸೂಕ್ತ ರೀತಿಯಲ್ಲಿ ಪರಿಹಾರವನ್ನೂ ನೀಡಲ್ಲ. ಸೂಕ್ತ ಪರಿಹಾರಕ್ಕಾಗಿ ಮೂಡಿಗೆರೆ ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಡಾನೆ ಹಾವಳಿ ನಿಂತಿಲ್ಲ, ಸರ್ಕಾರದಿಂದ ಸಮಪರ್ಕಕ ಪರಿಹಾರವೂ ಬರುತ್ತಿಲ್ಲ. ಹೀಗೆ ಮುಂದುವರಿದರೆ ನಾವು ಬದುಕುವುದಾದರೂ ಹೇಗೆಂದು ಹಳ್ಳಿಗರು ಪ್ರಶ್ನಿಸಿದ್ದಾರೆ.

ತಾಲೂಕಿನ ಸಾರಗೋಡು, ಕುಂದೂರು, ಗೌಡಹಳ್ಳಿಯಲ್ಲೂ ಆನೆ ಹಾವಳಿ ಮಿತಿಮೀರಿದೆ. ಅರಣ್ಯ ಅಧಿಕಾರಿಗಳು ಕಾಡಾನೆ ಹಾವಳಿ ತಪ್ಪಿಸಬೇಕು, ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement