ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿ ಪ್ರದೇಶದಲ್ಲಿ ಮತ್ತೆ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಟೊಮಾಟೋ, ಪಪ್ಪಾಯ, ಬೀನ್ಸ್, ಭತ್ತ ಸೇರಿದಂತೆ ರೈತರ ಪಂಪು ಮೋಟಾರ್, ಗುಡಿಸಲುಗಳನ್ನು ಧ್ವಂಸ ಮಾಡಿವೆ.
ಶುಕ್ರವಾರ ರಾತ್ರಿ ರೈತರ ತೋಟಗಳ ಮೇಲೆ ದಾಳಿ ಮಾಡಿರುವ 6 ಆನೆಗಳ ಹಿಂಡು ನೂರಾರು ಎಕರೆ ಪ್ರದೇಶದ ವಿವಿಧ ಬೆಳೆಗಳನ್ನು ನಾಶ ಮಾಡಿವೆ. ಪ್ರತಿ ವರ್ಷ ಕಾಡಾನೆ ಹಾವಳಿ ಹೆಚ್ಚಾಗುತ್ತಲಿದ್ದು, ಆಹಾರ-ನೀರು ಹರಸಿ ನಾಡಿನತ್ತ ಆನೆಗಳ ಹಿಂಡು ಹೆಜ್ಜೆ ಹಾಕುತ್ತಲಿವೆ. ಇದರಿಂದ ಅರಣ್ಯ ಪ್ರದೇಶದ ಗಡಿಭಾಗದ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಜೊತೆಗೆ ಲಕ್ಷಾಂತರ ರೂಪಾಯಿ ಬೆಳೆಗಳನ್ನು ಕಳೆದುಕೊಳ್ಳುವಂತಾಗಿದೆ. ಇದರಿಂದ ರೈತರಿಗೆ ಪರಿಹಾರವೂ ಸಿಗದೆ, ರಕ್ಷಣೆಯೂ ಇಲ್ಲದಾಗಿದೆ.
ಪ್ರಮುಖವಾಗಿ ಜಿಲ್ಲೆಯ ಗಡಿ ಪ್ರದೇಶವಾದ ಬಂಗಾರಪೇಟೆ ತಾಲೂಕಿನ ಆಂಧ್ರ ಗಡಿಯ ಚಿಕ್ಕಕಳವಂಚಿ, ತೊಪ್ಪನಹಳ್ಳಿ, ಕದರಿನತ್ತ ಗ್ರಾಮಗಳ ಬಳಿ ಸುಮಾರು ಆರು ಆನೆಗಳ ಹಿಂಡು ಕಳೆದ 15 ದಿನಗಳಿಂದ ಬೀಡು ಬಿಟ್ಟಿವೆ. ರಾಮಕುಪ್ಪಂ ಹಾಗೂ ಕೃಷ್ಣಗಿರಿ ಅರಣ್ಯ ಪ್ರದೇಶದಿಂದ ಬಂದಿರುವ ಈ ಆನೆಗಳ ಹಿಂಡು ಕರ್ನಾಟಕದ ಗಡಿ ಭಾಗದ ಜನರ ನಿದ್ದೆಗೆಡಿಸಿವೆ.
ಜಿಲ್ಲೆಯ ಗಡಿಭಾಗವಾದ ಕಾಮಸಮುದ್ರಂ ಪ್ರದೇಶ ಸುತ್ತಮುತ್ತ ಸಾವಿರಾರು ಹೆಕ್ಟೇರು ಅರಣ್ಯ ಪ್ರದೇಶವಿದೆ. ಈ ಅರಣ್ಯ ಪ್ರದೇಶ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ಅರಣ್ಯಕ್ಕೆ ಸಂಪರ್ಕ ಹೊಂದಿದೆ. ಹೀಗಾಗಿ ಈ ಭಾಗದಲ್ಲಿ ಇದೀಗ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಪ್ರತಿ ವರ್ಷ ನೂರಾರು ಆನೆಗಳು ಇಲ್ಲಿಗೆ ಆಹಾರ ನೀರಿಗಾಗಿ ವಲಸೆ ಬರುತ್ತಿದ್ದು, ಆನೆಗಳಿಂದಾಗಿ ರೈತರು ಬೆಳೆದ ಬೆಳೆಗಳ ಜೊತೆಗೆ ರೈತರು ಸಾವನ್ನಪ್ಪಿರುವ ಘಟನೆಗಳು ಸಂಭವಿಸಿದೆ.
ಆನೆ ಹಿಂಡನ್ನು ಕಾಡಿಗಟ್ಟಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ, ಪಟಾಕಿ, ಸಿಡಿ ಮದ್ದುಗಳನ್ನು ಬಳಸಿಕೊಂಡು ಹಗಲು ರಾತ್ರಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಕಾಡಾನೆಗಳ ದಾಳಿಯಿಂದ ರೈತರು ಕಳೆದುಕೊಂಡ ನೂರಾರು ಎಕರೆ ಬೆಳೆಗೆ ಪರಿಹಾರ ನೀಡಿ, ಸರ್ಕಾರ ಸಹಾಯಹಸ್ತವನ್ನು ಚಾಚಬೇಕು. ಅಲ್ಲದೇ ಆನೆ ಕಾರಿಡಾರ್ ನಿರ್ಮಾಣ ಮಾಡಿ, ಈ ಭಾಗದ ಜನರಿಗೆ ನೆಮ್ಮದಿ ಕಲ್ಪಿಸಬೇಕಾಗಿದೆ ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.