ಮಡಿಕೇರಿ: ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಆನೆಯೊಂದು ಮೃತಪಟ್ಟಿದೆ.
ಇಂದು ಬೆಳಗ್ಗೆ ಮತ್ತಿಗೋಡು ಕ್ಯಾಪ್‍ನಲ್ಲಿ ಈ ಸಾಕಾನೆ ಎಂದಿನಂತೆ ಸ್ನಾನ ಮಾಡಿ ಆಹಾರವನ್ನು ತೆಗೆದುಕೊಂಡಿತ್ತು. ಆದರೆ ಮಧ್ಯಾಹ್ನದ ವೇಳೆ ಇದ್ದಕ್ಕಿದ್ದಂತೆ ಅಸ್ವಸ್ಥವಾದ ಆನೆ ನೀರಿನ ತೊಟ್ಟಿ ಬಳಿ ನೀರು ಕುಡಿದು ದಿಢೀರ್ ಕುಸಿದುಬಿದ್ದಿದೆ. ಆನೆ ಕುಸಿದು ಬಿದ್ದ ತಕ್ಷಣ ಕ್ಯಾಂಪ್‍ನಲ್ಲಿದ್ದ ಮಾವುತರು ಅರಣ್ಯ ಇಲಾಖೆಯ ಆಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಆದ್ರೆ ವೈದ್ಯರು ಕ್ಯಾಂಪ್‍ಗೆ ಬಂದು ಆನೆಗೆ ಚಿಕಿತ್ಸೆ ನೀಡುವ ಮೊದಲೇ ಅದು ಮೃತಪಟ್ಟಿತ್ತು.
ಈ ಸಂಬಂಧ ನಾಗರಹೊಳೆ ಡಿಎಫ್‍ಓ ಹಾಗೂ ಆನೆ ವೈದ್ಯ ಡಾ. ನಾಗರಾಜು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಹೃದಯಾಘಾತವಾಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಆನೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಇದರ ವರದಿ ಬಂದ ಬಳಿಕ ಆನೆ ಸಾವಿಗೆ ನಿಖರ ಕಾರಣವೇನು ಎಂಬುದು ತಿಳಿಯಲಿದೆ.