ಬ್ಯಾಂಕಾಕ್: ಸಾಮಾನ್ಯವಾಗಿ ಕಾರಿನ ಟಾಪ್ ಮೇಲೆ ನಾಯಿ, ಕೋತಿ, ಪಕ್ಷಿಗಳು ಹಾಗೂ ಜನರು ಹತ್ತಿ ಕೂತ ದೃಶ್ಯವನ್ನು ನೋಡಿರಬಹುದು. ಆದರೆ ಥೈಲ್ಯಾಂಡ್‌ನಲ್ಲಿ ದೈತ್ಯ ಆನೆಯೊಂದು ಕಾರಿನ ಟಾಪ್ ಹತ್ತಿ ಕೂತ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದೆ.
ಥೈಲ್ಯಾಂಡ್‌ನ ಖಾವೊ ಯೈ ರಾಷ್ಟ್ರೀಯ ಉದ್ಯಾನವದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರನ್ನು ಆನೆಯೊಂದು ಅಡ್ಡಗಟ್ಟಿ, ಕಾರಿನ ಟಾಪ್ ಮೇಲೆ ಹತ್ತಿ ಕೂತಿದೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಇತರೆ ವಾಹನ ಸವಾರರು ವಿಡಿಯೋ ಮಾಡಿದ್ದು, ಈ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಡ್ಯುಯಾ(35) ಹೆಸರಿನ ಆನೆ ರಾಷ್ಟ್ರೀಯ ಉದ್ಯಾನವದ ರಸ್ತೆ ಮಧ್ಯೆ ಬರುತ್ತಿತ್ತು. ಈ ವೇಳೆ ಈ ಮಾರ್ಗದಲ್ಲಿಯೇ ಚಲಿಸುತ್ತಿದ್ದ ಕಾರನ್ನು ಅಟ್ಟಗಟ್ಟಿದೆ. ನಂತರ ಕಾರಿನ ಟಾಪ್ ಮೇಲೆ ಕುಳಿತುಕೊಳ್ಳಲು ಯತ್ನಿಸಿದೆ. ಮೊದಲು ಕಾರಿನ ಮುಂಬದಿಯಿಂದ ಹತ್ತಲು ಆನೆ ಪ್ರಯತ್ನಿಸಿದೆ. ಅದು ಆಗದೇ ಇದ್ದಾಗ ಕಾರಿನ ಹಿಂಬದಿಯಿಂದ ಹತ್ತಿ ಟಾಪ್ ಮೇಲೆ ಕುಳಿತಿದೆ. ಬಳಿಕ ಆನೆ ಕಾರನ್ನು ಬಿಟ್ಟು ಸರಿದಾಗ ಚಾಲಕ ವಾಹನ ಚಲಾಯಿಸಿಕೊಂಡು ಮುಂದೆ ಬಂದಿದ್ದಾನೆ. ಈ ವೇಳೆ ಕಾರಿನ ಹಿಂಬದಿ ಗಾಜು ಒಡೆದು ಪುಡಿಯಾಗಿರುವುದು, ಆನೆಯ ಭಾರಕ್ಕೆ ಕಾರಿನ ಟಾಪ್ ಕುಗ್ಗಿ ಹೋಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
https://www.facebook.com/supparach.niltarach/posts/2562223873823430
ಅದೃಷ್ಟವಾಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ ಹಾನಿಗೊಳಗಾದ ಕಾರಿನ ಒಳಗೆ ಎಷ್ಟು ಮಂದಿ ಇದ್ದರು ಎಂಬ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ಆನೆ ಹಲವು ಪ್ರವಾಸಿಗರ ಕಾರುಗಳ ಮೇಲೂ ಕುಳಿತುಕೊಳ್ಳಲು ಯತ್ನಿಸಿರುವ ಫೋಟೋಗಳನ್ನು ವಾಹನ ಸವಾರ ಪಾಸ್ಸಾಕಾರ್ನ್ ನಿಲ್ತಾರಾಚ್ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಉದ್ಯಾನವನದ ಅಧಿಕಾರಿಗಳು, ಈ ಆನೆ ಅಲ್ಲಿ ಜನರಿಗೆ ಸ್ವಾಗತ ಕೋರಲು ಬಂದಿತ್ತು. ಅದು ಯಾವತ್ತು ಯಾವ ಪ್ರವಾಸಿಗರು ಹಾಗೂ ವಾಹನಕ್ಕೂ ಹಾನಿ ಮಾಡಿರಲಿಲ್ಲ. ಆದರೆ ಯಾಕೋ ಗೊತ್ತಿಲ್ಲ ಈ ಬಾರಿ ಹೀಗೆ ಮಾಡಿದೆ. ಆದ್ದರಿಂದ ಈ ಮಾರ್ಗದಲ್ಲಿ ಸಾಗುವಾಗ ಆಸೆಗಳು ಅಡ್ಡ ಬಂದರೆ ಅವುಗಳಿಂದ 30 ಮೀಟರ್ ಅಂತರ ಕಾಯ್ದುಕೊಂಡು ಸಾಗಿರಿ ಎಂದು ತಿಳಿಸಿದ್ದಾರೆ.