ರಾಮನಗರ: ಕಾಡಾನೆಗಳ ಹಿಂಡು ಆಹಾರ ಅರಸಿ ಕಾಡಿನಿಂದ ನಾಡಿನತ್ತ ಆಗಮಿಸಿದ್ದು, ಮಾಗಡಿ ತಾಲೂಕಿನ ಲಕ್ಷ್ಮೀಪುರದ ಜನರದಲ್ಲಿ ಆತಂಕ ಉಂಟು ಮಾಡಿದೆ.
ನಾಲ್ಕು ಆನೆಗಳ ಹಿಂಡು ಲಕ್ಷ್ಮೀಪುರದ ಸಮೀಪವಿರುವ ಸಾವನದುರ್ಗ ಅರಣ್ಯ ಪ್ರದೇಶದಿಂದ ಲಕ್ಷ್ಮಿಪುರದ ಸಿದ್ದೇಶ್ವರ ಬೆಟ್ಟದ ಬಳಿ ಕಾಣಿಸಿಕೊಂಡಿವೆ. ಕಾಡಂಚಿನಲ್ಲಿ ಆನೆಗಳನ್ನು ಕಂಡ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಆಹಾರ ಅರಸಿ ಕಾಡಿನಿಂದ ನಾಡಿನತ್ತ ಬರುತ್ತಿರುವ ಕಾಡಾನೆಗಳು ರೈತರ ಬೆಳೆಯನ್ನು ನಾಶಪಡಿಸುತ್ತಿವೆ. ಅತ್ತಿಂಗೆರೆ ಗ್ರಾಮದ ರಾಮಣ್ಣ ಎಂಬವರ ತೋಟಕ್ಕೆ ಶನಿವಾರ ರಾತ್ರಿ ನುಗ್ಗಿದ ಕಾಡಾನೆಗಳು ಹತ್ತಕ್ಕೂ ಹೆಚ್ಚು ಮಾವಿನ ಮರ, ತೆಂಗು ಹಾಗೂ ಅಡಿಕೆ ಸಸಿಗಳನ್ನು ನಾಶಪಡಿಸಿವೆ.
ಈ ಕುರಿತು ಸ್ಥಳೀಯರು ದೂರು ನೀಡುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಕಾಡಾನೆಗಳನ್ನು ಮತ್ತೆ ಕಾಡಿಗೆ ಓಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.