ಚಿಕ್ಕಮಗಳೂರು: ಕಳೆದ ನಾಲ್ಕೈದು ತಿಂಗಳಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಅರಣ್ಯ ಅಧಿಕಾರಿಗಳು ಹಾಗೂ ಜನರ ನಿದ್ದೆಗೆಡಿಸಿ ನೆಮ್ಮದಿ ಹಾಳು ಮಾಡಿದ್ದ ಒಂಟಿಸಲಗ, ನರಹಂತಕ ಕಾಡಾನೆ ಮೂಡಿಗೆರೆ ಭೈರನನ್ನು (Mudigere Bhaira) ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಮೂಡಿಗೆರೆ ತಾಲೂಕಿನಾದ್ಯಂತ ದಾಂಧಲೆ ನಡೆಸಿಕೊಂಡು ಇಬ್ಬರ ಜೀವ ತೆಗೆದಿದ್ದ ಭೈರನಿಂದ ಜನ ರೋಸಿ ಹೋಗಿ, ಅರಣ್ಯ ಇಲಾಖೆ(Forest Department) ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು. ಆನೆ ಹಾವಳಿಯಿಂದ ತಿಂಗಳಿಗೊಂದು ಹೆಣ ಬಿದ್ದ ಪರಿಣಾಮ ತಾಳ್ಮೆಗೆಟ್ಟು ಕಂಗೆಟ್ಟಿದ್ದ ಜನ ಶಾಸಕ ಕುಮಾರಸ್ವಾಮಿ ಮೇಲೂ ಹಲ್ಲೆಗೆ ಮುಂದಾಗಿದ್ದರು.
Advertisement
Advertisement
ಜನ ಯಾವಾಗ ಶಾಸಕರ ಮೇಲೆ ಹಲ್ಲೆಗೆ ಮುಂದಾದರೋ ಕೂಡಲೇ ಸರ್ಕಾರ ಮೂರು ಕಾಡಾನೆಗಳನ್ನು ಹಿಡಿಯಲು ಹಸಿರು ನಿಶಾನೆ ತೋರಿತ್ತು. ಸರ್ಕಾರ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಕಳೆದ ಎಂಟತ್ತು ದಿನಗಳಿಂದ ಆರು ಸಾಕಾನೆಗಳೊಂದಿಗೆ ಮೂರು ಕಾಡಾನೆಗಳನ್ನು ಹಿಡಿಯಲು ಅಧಿಕಾರಿಗಳು-ಸ್ಥಳೀಯರು ಹಗಲಿರುಳು ಕಷ್ಟ ಪಟ್ಟಿದ್ದರು. ಎರಡು ಕಾಡಾನೆಗಳನ್ನು ಸೆರೆ ಹಿಡಿದು ಮಡಿಕೇರಿಯ ಆನೆ ದುಬಾರೆ ಹಾಗೂ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆಬಿಡಾರಕ್ಕೆ ಬಿಟ್ಟಿದ್ದರು. ಆದರೆ ಪುಂಡ ಒಂಟಿಸಲಗ ಮೂಡಿಗೆರೆ ಭೈರ ಮಾತ್ರ ಎಲ್ಲರ ಕಣ್ತಪ್ಪಿಸಿ ನಾಪತ್ತೆಯಾಗುತ್ತಿದ್ದ.
Advertisement
ಅರಣ್ಯ ಅಧಿಕಾರಿಗಳ ಡ್ರೋನ್ ಕ್ಯಾಮೆರಾಕ್ಕೂ ಕಣ್ತಪ್ಪಿಸಿ ದಟ್ಟ ಕಾನನದಲ್ಲಿ ಪರಾರಿಯಾಗಿ ಓಡಾಡ್ತಿದ್ದ. ಆದರೆ ಭಾನುವಾರ ಮಧ್ಯಾಹ್ನ ಮೂಡಿಗೆರೆ ತಾಲೂಕಿನ ಊರಬಗೆ ಗ್ರಾಮದಲ್ಲಿ ಭೈರ ಇರುವ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿ ನರಹಂತಕನನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ. ಈ ಮೂಡಿಗೆರೆ ಭೈರನನ್ನು ಸೆರೆ ಹಿಡಿಯುವಷ್ಟರಲ್ಲಿ ಅರಣ್ಯ ಅಧಿಕಾರಿಗಳು ಕೂಡ ಹೈರಾಣಾಗಿದ್ದಾರೆ. ನರಹಂತಕನಾಗಿ ಜನರ ನಿದ್ದೆಗೆಡಿಸಿದ್ದ ಮೂಡಿಗೆರೆ ಭೈರ ಸೆರೆಯಾದ ಕಾರಣ ಜನರ ಜೊತೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಭಾರೀ ಮಳೆಯ ಎಚ್ಚರಿಕೆ
Advertisement
ಮೂಡಿಗೆರೆ ಭೈರನ ಹೆಜ್ಜೆಗುರುತು :
ಈ ಮೂಡಿಗೆರೆ ಭೈರನ ಹೆಜ್ಜೆ ಗುರುತುಗಳು ಮಲೆನಾಡ ಮಣ್ಣಲ್ಲಿ ಅಚ್ಚಳಿಯದೆ ಉಳಿದಿವೆ. ಯಾಕೆಂದರೆ ಮಲೆನಾಡಲ್ಲಿ ದಶಕಗಳಿಂದ ಆನೆ ಹಾವಳಿ ಇದೆ. ಆದರೆ ಜನರಿಗೆ ಹಾಗೂ ಅಧಿಕಾರಿಗಳಿಗೆ ಇವನಷ್ಟು ಯಾರೂ ಕಾಟ ಕೊಟ್ಟಿರಲಿಲ್ಲ. ಜೀವ ತೆಗೆದಿರಲಿಲ್ಲ. ಇವನ ಅಬ್ಬರಕ್ಕೆ ಎರಡು ತಿಂಗಳಲ್ಲಿ ಇಬ್ಬರು ಬಲಿಯಾಗಿದ್ದರು. ಕಳೆದ ತಿಂಗಳ ಹಿಂದೆ ಮಹಿಳೆಯೊಬ್ಬಳು ಸಾವನ್ನಪ್ಪಿದ್ದರಿಂದ ಜನ ರೊಚ್ಚಿಗೆದ್ದು ಅರಣ್ಯ ಇಲಾಖೆಯ ಕಳ್ಳ ಭೇಟೆ ನಿಗ್ರಹ ಕಚೇರಿಯನ್ನು ಧ್ವಂಸ ಮಾಡಿದ್ದರು. ಆನೆ ದಾಳಿಗೆ ಕಂಗೆಟ್ಟು ಶಾಸಕರ ಮೇಲೂ ಹಲ್ಲೆ ಮಾಡಿದ್ದರು. ಇವನ ಕಾಟಕ್ಕೆ ಬೇಸತ್ತು ಅಧಿಕಾರಿಗಳು ಬೀದಿ-ಬೀದಿಯಲ್ಲಿ ಮೈಕ್ ಹಿಡಿದು ಅನೌನ್ಸ್ ಮಾಡಿದ್ದರು. ಒಂದು ಪುಂಡ ಕಾಡಾನೆ ಮಲೆನಾಡಿಗರಿಗೆ ಈ ಮಟ್ಟಕ್ಕೆ ರೋಧನೆ ಕೊಟ್ಟಿದ್ದು ಇದೇ ಮೊದಲು.
ಆನೆಗಳೇ ವಾಪಸ್ ಹೋಗಿದ್ವು :
ಭೈರನ ಸೆರೆಗೆ ಅರಣ್ಯ ಇಲಾಖೆ ಪ್ರಯತ್ನಿಸಿದ್ದು ಇದೇ ಮೊದಲಲ್ಲ. ಕಳೆದ ಎರಡು ತಿಂಗಳ ಹಿಂದೆಯೂ ಇವನನ್ನು ಹಿಡಿಯೋಕೆ ಎಂದು ದಸರಾ ಆನೆಗಳ ಜೊತೆ ಮಡಿಕೇರಿಯಿಂದ ಒಟ್ಟು ಆರು ಕಾಡಾನೆಗಳು ಬಂದಿದ್ದವು. ಎರಡು ಮೂರು ದಿನ ಕಾರ್ಯಾಚರಣೆ ಕೂಡ ನಡೆಸಿದ್ದವು. ಆದರೆ ಆ ಹೊತ್ತಿಗಾಗಲೇ ಈ ಭೈರ ಕಾಡಿನಲ್ಲಿ ಕಣ್ಮರೆಯಾಗಿದ್ದ.
ಈ ವೇಳೆ ಆನೆಗಳಿಗೆ ಜ್ವರ ಹಾಗೂ ಹೊಟ್ಟೆ ಕೆಟ್ಟಿತ್ತು ಎಂದು ಕಾರ್ಯಾಚರಣೆ ಸ್ಥಗಿತಗೊಳಿಸಿ ವಾಪಸ್ ಕಳಿಸಿದ್ದರು. ಸಾಕಾನೆಗಳು ಹೋಗುತ್ತಿದ್ದಂತೆ ಮತ್ತೆ ಬಂದ ಈ ಪುಂಡ ಸಿಕ್ಕಾಪಟ್ಟೆ ಕಾಟ ನೀಡಲು ಶುರುಮಾಡಿದ್ದ. ಎರಡನೇ ಬಾರಿ ಮತ್ತೆ ಬಂದ ಆರು ಸಾಕಾನೆಗಳು ಎಂಟು ದಿನಗಳ ಕಾಲ ನಿರಂತರ ಕಾರ್ಯಾಚರಣೆಯ ಬಳಿಕ ಈ ಭೈರನನ್ನ ಸೆರೆ ಹಿಡಿದಿವೆ.