ಮೈಸೂರು: ಕಾಡಾನೆಯೊಂದು ದಾಳಿಗೆ ಮುಂದಾಗಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ತಪ್ಪಿಸಿಕೊಂಡಿದ್ದಾರೆ. ಆದರೆ ಅಲ್ಲೇ ಸ್ಥಳದಲ್ಲಿದ್ದ ಅವರ ಕಾರನ್ನು ಜಖಂಗೊಳಿಸಿರುವ ಘಟನೆ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.
ಮೂಲತಃ ಕೊಡಗಿನ ವಿರಾಜಪೇಟೆಯ ನಿವಾಸಿಯಾದ ಶುಂಠಿ ಬೆಳೆಗಾರ ತಂಗಚನ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರು ಮುಳ್ಳೂರು ಗ್ರಾಮದಲ್ಲಿ ಮೂರು ಎಕರೆ ಜಮೀನಿನಲ್ಲಿ ಶುಂಠಿ ಬೆಳೆದಿದ್ದರು. ಅದನ್ನು ಮಾರಾಟ ಮಾಡಲು ಕೊಡಗಿಗೆ ಹೋಗಲು ಬಸ್ ಗಾಗಿ ಕಾಯುತ್ತಿದ್ದರು.
ಈ ಸಂದರ್ಭದಲ್ಲಿ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಭಾಗದಿಂದ ಆನೆಯೊಂದು ದಿಢೀರ್ ಬಂದು ದಾಳಿ ಮಾಡಿದೆ. ಆಗ ತಂಗಚನ್ ಅವರು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಅಲ್ಲೇ ಸ್ಥಳದಲ್ಲಿದ್ದ ಕಾರಿನ ಮೇಲೆ ತನ್ನ ಆಕ್ರೋಶವನ್ನು ತೀರಿಸಿಕೊಂಡಿದೆ. ಕಾಡಾನೆ ತನ್ನ ದಂತದಿಂದ ಕಾರನ್ನು ಎತ್ತಿ ಹಾಕಿ ಜಖಂಗೊಳಿಸಿದೆ.