ಮೈಸೂರು: ಕಳೆದ ಎರಡು ದಿನಗಳ ಹಿಂದೆ ಕೊಡಗು ಜಿಲ್ಲೆಯ ಸಾಕಾನೆ ಶಿಬಿರದಲ್ಲಿ ದಸರಾ ಆನೆ ದ್ರೋಣ ಸಾವನ್ನಪ್ಪಿದ ಬೆನ್ನಲ್ಲೇ ಇಂದು ಮತ್ತೊಂದು ಆನೆ ಮೃತ ಪಟ್ಟಿರುವ ಘಟನೆ ಮೈಸೂರಿನ ಆನೆ ಚೌಕೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
45 ವರ್ಷದ ಹೆಣ್ಣಾನೆ ನಿತ್ರಾಣಗೊಂಡು ಜಿಲ್ಲೆಯ ಪಿರಿಯಾಪಟ್ಟಣದ ಅರಣ್ಯ ವ್ಯಾಪ್ತಿಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಈ ವೇಳೆ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಆನೆಗೆ ಚಿಕಿತ್ಸೆ ನೀಡಿ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆನೆ ಸಾವನ್ನಪ್ಪಿದೆ.
ದಸಾರ ಆನೆ ದ್ರೋಣ ಸಾವನ್ನಪ್ಪುತ್ತಿದ್ದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿತ್ತು. ದ್ರೋಣ ಅನಾರೋಗ್ಯದಿಂದ ಬಳಲುತ್ತಿದ್ದರೂ ಮೇಲಾಧಿಕಾರಿಗಳು ವೈದ್ಯರನ್ನ ಕರೆಯಿಸಿ ಚಿಕಿತ್ಸೆ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ದ್ರೋಣ ಆನೆ ಸಾವಿನ ಬೆನ್ನಲ್ಲೇ ಮತ್ತೊಂದು ಆನೆ ಸಾವನ್ನಪ್ಪಿರುವುದು ಪ್ರಾಣಿ ಪ್ರಿಯರಿಗೆ ತೀವ್ರ ನೋವುಂಟು ಮಾಡಿದೆ. ಆನೆಗಳಿಗೆ ಸೂಕ್ತ ಚಿಕಿತ್ಸೆ ಲಭಿಸುವಂತೆ ಮಾಡಲು ಅರಣ್ಯ ಇಲಾಖೆಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.