ರಾಮನಗರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ಅಕ್ರಮವಾಗಿ ಬೆಳೆ ರಕ್ಷಣೆಗೆ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಬಳಿ ನಡೆದಿದೆ.
ತಾಲೂಕಿನ ಉಯ್ಯಂಬಳ್ಳಿ ಹಾಗೂ ಹೆಗ್ಗನೂರು ಗ್ರಾಮದ ಮಧ್ಯದಲ್ಲಿನ ಉಯ್ಯಂಬಳ್ಳಿ ಗ್ರಾಮದ ರೈತ ಶಿವಲಿಂಗೇಗೌಡ ಎಂಬುವವರ ಜಮೀನಿನಲ್ಲಿ ಸುಮಾರು 15 ವರ್ಷದ ಕಾಡಾನೆಯೊಂದು ವಿದ್ಯುತ್ ಶಾಕ್‍ಗೆ ಬಲಿಯಾಗಿದೆ.
Advertisement
ಕಾವೇರಿ ವನ್ಯಜೀವಿ ಧಾಮದ ಚೀಲಂದವಾಡಿ ಅರಣ್ಯ ಪ್ರದೇಶದಿಂದ ಬಂದ ಆನೆ ರೈತ ಶಿವಲಿಂಗೇಗೌಡರ ಜಮೀನಿನಲ್ಲಿ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಹಂದಿ ಹಾಗೂ ಜಿಂಕೆಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ರೈತ ಅಕ್ರಮವಾಗಿ ಜಮೀನಿನ ಸುತ್ತ ವಿದ್ಯುತ್ ಬೇಲಿ ನಿರ್ಮಿಸಿದ್ದ.
Advertisement
Advertisement
ಘಟನೆ ಸಂಬಂಧ ಕಾವೇರಿ ವನ್ಯಜೀವಿಧಾಮದ ಅರಣ್ಯಾಧಿಕಾರಿಗಳು ಹಾಗೂ ಚೀಲಂದವಾಡಿ ಅರಣ್ಯ ಪ್ರದೇಶದ ಕನಕಪುರ ಅರಣ್ಯ ಉಪವಿಭಾಗಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತ ಕಾಡಾನೆಯ ಮರಣೋತ್ತರ ಪರೀಕ್ಷೆ ನಡೆಸಿ ಪೂಜೆ ಮಾಡಿ ಅಂತ್ಯಸಂಸ್ಕಾರ ನಡೆಸಿದ್ದಾರೆ. ಕಾಡಾನೆ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಶಿವಲಿಂಗೇಗೌಡ ನಾಪತ್ತೆಯಾಗಿದ್ದು, ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಕಾಡ್ಗಿಚ್ಚಿನ ಹಿನ್ನೆಲೆ ನಾಡಿನತ್ತ ಪ್ರಾಣಿಗಳು: ಬನ್ನೆರುಘಟ್ಟ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದ ಸಂದರ್ಭದಲ್ಲಿಯೇ ಕಾವೇರಿ ವನ್ಯಜೀವಿಧಾಮಕ್ಕೂ ಕೂಡಾ ಬೆಂಕಿ ಬಿದ್ದು ನೂರಾರು ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಅರಣ್ಯದಲ್ಲಿ ಆಹಾರವಿಲ್ಲದೇ ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡಿವೆ. ಕಾಡಾನೆಗಳು ನಾಡಿನತ್ತ ಮುಖ ಮಾಡಿ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಅರಣ್ಯದಲ್ಲಿಯೇ ನೀರು ಹಾಗೂ ಆಹಾರವನ್ನ ಒದಗಿಸುವಂತಹ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಬೇಕು. ನೀರಿನ ಹೊಂಡಗಳನ್ನ ತೆಗೆದು ಟ್ಯಾಂಕರ್ ಮೂಲಕ ನೀರು ತುಂಬಿಸಿ ಕಾಡು ಪ್ರಾಣಿಗಳ ರಕ್ಷಣೆಗೆ ನೆರವಾಗಬೇಕು ಎಂದು ವನ್ಯಜೀವಿ ಪ್ರೇಮಿಗಳು ಆಗ್ರಹಿಸಿದ್ದಾರೆ.