ಬೆಂಗಳೂರು: ನಗರದ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ವನ್ಯ ಜೀವಿಗಳ ತಾಣವಾಗಿರುವುದರಿಂದ ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದ್ದು, ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸಿ ಇಲ್ಲಿನ ವನ್ಯ ಜೀವಿಗಳನ್ನು ಕಂಡು ಸಂತಸಗೊಳ್ಳುತ್ತಾರೆ. ಇದೀಗ ಪಾರ್ಕ್ ಗೆ ಹೊಸ ಅತಿಥಿ ಆಗಮನವಾಗಿದ್ದು. ಸಾಕಷ್ಟು ಪ್ರಾಣಿಪ್ರಿಯರನ್ನು ಸೆಳೆಯುತ್ತಿದೆ
ಉದ್ಯಾನವನದ ಆನೆ ಕ್ಯಾಂಪ್ ನಲ್ಲಿರುವ ನಿಸರ್ಗ ಎಂಬ ಆನೆ ಕಳೆದ 20 ದಿನಗಳ ಹಿಂದೆ ಗಂಡು ಮರಿಗೆ ಜನ್ಮ ನೀಡಿದ್ದು, ಇಷ್ಟು ದಿನ ತಾಯಿಯ ಆರೈಕೆಯಲ್ಲಿದ್ದ ಮರಿ ಆನೆಯನ್ನು ಪಾರ್ಕ್ ಸಿಬ್ಬಂದಿ ಪ್ರವಾಸಿಗರ ವೀಕ್ಷಣೆಗೆ ಬಿಟ್ಟಿರುವುದರಿಂದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಆನೆ ಕ್ಯಾಂಪ್ ನಲ್ಲಿ 22 ಆನೆಗಳಿದ್ದು, ಇದೀಗ ಈ ಸಂಖ್ಯೆ 23 ಕ್ಕೆ ಏರಿಕೆಯಾಗಿದೆ. ತಾಯಿ ಮಗನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವ ಪಾರ್ಕ್ ಸಿಬ್ಬಂದಿ ತಾಯಿ ನಿಸರ್ಗಾಗೆ ಹುಲ್ಲು ಹಾಗು ಬೆಲ್ಲದ ಜೊತೆಗೆ ವಿವಿಧ ಬಗೆಯ ಕಾಳುಗಳ ಆಹಾರ ನೀಡುತ್ತಿದ್ದಾರೆ.
ಉದ್ಯಾನವನದಲ್ಲಿ ಇತರೇ ಪ್ರಾಣಿಗಳಿಗಿಂತ ಆನೆಗಳು ಹೆಚ್ಚು ಅಕರ್ಷಣಿಯವಾಗಿದ್ದು, ಇದೀಗ ಇದರ ಸೊಬಗನ್ನು ಮರಿ ಆನೆ ಮತ್ತಷ್ಟು ಹೆಚ್ಚಿಸಿದೆ. ಮರಿ ಆನೆಯ ಮತ್ತಷ್ಟು ತುಂಟಾಟವನ್ನು ನೋಡಲು ನೀವು ಒಮ್ಮೆ ಬನ್ನೇರುಘಟ್ಟ ಆನೆ ಕ್ಯಾಂಪ್ ಗೆ ಭೇಟಿ ನೀಡಬಹುದು.