ಕಂದಾ..ಕಂದಾ ಎದ್ದೇಳು.. ಬಾ ಹಾಲುಣಿಸುವೆ.. – ತಾಯಿ ಆನೆಯ ರೋಧನೆ

Public TV
1 Min Read
HAN ELEPHANT copy

ಹಾಸನ: ಅಮ್ಮನ ಪ್ರೀತಿಗೆ ಯಾರೂ ಕೂಡ ಸರಿಸಾಟಿ ಇಲ್ಲ. ಮಾತು ಬಾರದ ಮೂಕ ಪ್ರಾಣಿಗಳ ವರ್ತನೆ ಕೆಲವೊಮ್ಮೆ ಮಾನವರ ಪ್ರೀತಿಯನ್ನು ಮೀರಿಸುವಂತಿರುತ್ತದೆ. ಇದೇ ರೀತಿ ತಾಯಿ ಆನೆಯೊಂದು ಮೃತಪಟ್ಟ ತನ್ನ ಕಂದನನ್ನು ಬದುಕಿಸಲು ಹರಸಾಹಸ ಪಟ್ಟಿದೆ.

ಜಿಲ್ಲೆಯ ಸಕಲೇಶಪುರದಲ್ಲಿ ಕೊತ್ತನಹಳ್ಳಿ ಬಳಿ ಭತ್ತದ ಗದ್ದೆಯಲ್ಲಿ ಆನೆಯೊಂದು ಮರಿ ಆನೆಗೆ ಜನ್ಮ ನೀಡಿದೆ. ಆದರೆ ಕಾರಣವೇನು ಗೊತ್ತಿಲ್ಲ ಹುಟ್ಟಿದ ಕೂಡಲೆ ನವಜಾತ ಆನೆ ಮೃತಪಟ್ಟಿದೆ. ಇದರ ಅರಿವಿಲ್ಲದೆ ತಾಯಿ ಆನೆ ತನ್ನ ಮಗುವಿನ ಮೃತದೇಹವನ್ನು ಬಿಟ್ಟು ಕದಲದೆ ಎದ್ದೇಳಿಸಲು ಪ್ರಯತ್ನಿಸಿದೆ. ಅಷ್ಟೇ ಅಲ್ಲದೇ ತನ್ನ ಸಂಗಡಿಗ ಆನೆಯ ರೋಧನೆ ಕಂಡು ಇತರೆ 12 ಕ್ಕೂ ಹೆಚ್ಚು ಆನೆಗಳ ದಂಡು ತಾಯಿಯಾನೆಯನ್ನ ಬಿಟ್ಟುಹೋಗದೆ ತಮ್ಮ ಮಮತೆಯನ್ನೂ ಕೂಡ ತೋರಿದ್ದಾವೆ.

HSN 2

ರಾತ್ರಿ ಆಹಾರವನ್ನು ಅರಸಿಕೊಂಡ ಬಂದ ಈ ಆನೆಗಳ ದಂಡಿನಲ್ಲಿ ತಾಯಿ ಆನೆ ಮರಿಯಾನೆಗೆ ಜನ್ಮ ನೀಡಿದೆ. ತಾಯಿ ಆನೆಗೆ ಮರಿಯಾನೆ ಮೃತಪಟ್ಟ ವಿಚಾರಗೊತ್ತಿತ್ತೋ ಅಥವಾ ಇಲ್ಲವೋ ನಮಗೆ ತಿಳಿದಿಲ್ಲ. ಆದರೆ ತನ್ನ ಮಗುವಿನ ದೇಹವನ್ನು ಅಲ್ಲಿಂದ 200 ಮೀಟರ್ ವರೆಗೆ ಎಳೆದುಕೊಂಡು ಹೋಗಿದೆ. ಮರಿಗೆ ಜನ್ಮ ನೀಡಿದ ಕೂಡಲೆ ಆನೆ ತನ್ನ ಮರಿಗೆ ಹಾಲನ್ನು ಉಣಿಸಬೇಕು. ಇಲ್ಲವಾದಲ್ಲಿ ಸಹಜವಾಗಿ ತಾಯಿ ಆನೆಗೆ ನೋವು ಆರಂಭವಾಗುತ್ತದೆ. ಹಾಗಾಗಿ ತಾಯಿ ಆನೆ ತನ್ನ ಮಗುವನ್ನು ಏಳಿಸಲು ಪ್ರಯತ್ನಿಸಿದೆ. ಈ ರೀತಿಯ ತಾಯಿ ಮಮತೆ ಕೇವಲ ಮನುಷ್ಯರಲ್ಲಷ್ಟೆ ಅಲ್ಲ ಪ್ರಾಣಿಗಳಲ್ಲೂ ಇರುತ್ತೆ ಎಂದು ಪಶುವೈದ್ಯ ಮುರಳಿ ಅವರು ಹೇಳಿದ್ದಾರೆ.

HSN 3

ಒಂದೆಡೆ ಪಶ್ಚಿಮ ಘಟ್ಟದ ಈ ಕಾಡುಗಳಲ್ಲಿ ಆನೆಗಳು ಮತ್ತು ಮಾನವನ ನಡುವಿನ ಸಂಘರ್ಷ ಒಂದೆಡೆ ಆದರೆ, ಮತ್ತೊಂದೆಡೆ ಆಹಾರ ಅರಸಿ ನಾಡಿನೆಡೆಗೆ ಬರುವ ಆನೆಗಳು ಹಲವು ಕಾರಣಗಳಿಂದ ಸಾವನ್ನಪ್ಪತ್ತಿವೆ. ಪ್ರಾಣಿಗಳ ಮಾನವೀಯ ವರ್ತನೆ ನೋಡಿದ ನಾಗರೀಕ ಪ್ರಪಂಚ ಇದರ ಬಗ್ಗೆ ಗಮನಹರಿಸಬೇಕಿದೆ. ಇಂದು ಕೂಡ ತಾಯಿ ಆನೆ ತನ್ನ ಮರಿ ಆನೆಯನ್ನು ಎದ್ದೇಳಿಸಲು ಪ್ರಯತ್ನಿಸುತ್ತಿದ್ದು, ಮರಿಯಾನೆಯನ್ನು ಬಿಟ್ಟು ಹೋಗಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *