ಬೆಂಗಳೂರು: ಗ್ರಾಮಕ್ಕೆ ಬಂದಿದ್ದ ಆನೆಗಳ ಹಿಂಡನ್ನು ಓಡಿಸಲು ಗ್ರಾಮಸ್ಥರು ಪ್ರಯತ್ನಿಸುವಾಗ ಆನೆಯೊಂದು ಯುವಕನೊಬ್ಬನನ್ನು ತುಳಿದು ಗಾಯಗೊಳಿಸಿದ ಘಟನೆ ಆನೇಕಲ್ ಗಡಿ ಭಾಗದ ತಮಿಳುನಾಡಿನ ಬಿರ್ಜೆಪಲ್ಲಿ ಗ್ರಾಮದಲ್ಲಿ ನಡೆದಿದೆ.
ಶನಿವಾರ ಇಡೀ ರಾತ್ರಿ ಬಿರ್ಜೆಪಲ್ಲಿ ಗ್ರಾಮದ ಪಕ್ಕದಲ್ಲೇ ಆನೆಗಳ ಹಿಂಡು ಕಾಣಿಸಿಕೊಂಡಿತ್ತು. ಹೊಲಗಳಲ್ಲಿ ಬೆಳೆದಿದ್ದ ಬೆಳೆಯನ್ನು ನಾಶ ಮಾಡುತ್ತಿದ್ದ ಆನೆಗಳನ್ನು ಗ್ರಾಮಸ್ಥರು ಹಾಗು ಅರಣ್ಯ ಸಿಬ್ಬಂದಿ ಓಡಿಸುವ ವೇಳೆ ಗ್ರಾಮಸ್ಥರ ಮೇಲೆಯೇ ಆನೆಗಳು ತಿರುಗಿ ಬಿದ್ದಿವೆ. ಈ ಸಂದರ್ಭದಲ್ಲಿ ಗ್ರಾಮದ ಯುವಕನೊಬ್ಬನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಆತ ಗಾಯಗೊಂಡಿದ್ದಾನೆ.
Advertisement
Advertisement
ಈ ಕಾಡಾನೆಗಳ ಅಟ್ಟಹಾಸಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಏಕಾಏಕಿ ಯುವಕನ ಮೇಲೆ ದಾಳಿ ಮಾಡಿದ ಆನೆ, ತನ್ನ ಕಾಲುಗಳಿಂದ ಯುವಕನನ್ನು ತುಳಿಯಲು ಯತ್ನಿಸಿದೆ. ಹಾಗೆಯೇ ತಪ್ಪಿಸಿಕೊಳ್ಳಲು ಓಡಿ ಹೋಗುತ್ತಿದ್ದ ಯುವಕನ ಮೇಲೆ ತನ್ನ ಸೊಂಡಿಲಿನಿಂದ ದಾಳಿ ಮಾಡಿದೆ. ಆದ್ರೆ ಅದೃಷ್ಟವಶಾತ್ ಕುದಲೆಳೆಯ ಅಂತರದಲ್ಲಿ ಯುವಕ ಪಾರಾಗಿ ಜೀವ ಉಳಿಸಿಕೊಂಡಿದ್ದಾನೆ.
Advertisement
Advertisement
ಗಡಿ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಅಲ್ಲದೆ ಈ ಭಾಗದ ಜನರು ಆನೆಗಳ ಅಟ್ಟಹಾಸಕ್ಕೆ ಬೇಸತ್ತು ಹೋಗಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಈ ವಿಚಾರವಾಗಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ.
ಆನೆಗಳು ಕಾಡಿನಿಂದ ನಾಡಿಗೆ ಬರದಂತೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕೆಲ ಕಾಲ ಅರಣ್ಯ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ಕೂಡ ನಡೆಸಿದ್ದಾರೆ. ಇವೆಲ್ಲ ಘಟನೆಗಳ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಆನೆಗಳನ್ನು ಕಾಡಿಗೆ ಅಟ್ಟಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv