ಮೈಸೂರು: ಕಾಡಾನೆಯೊಂದು ಕೆಲಸದಲ್ಲಿ ತೊಡಗಿದ್ದ ಕೂಲಿ ಕಾರ್ಮಿಕನನ್ನು ಕಾಲಿನಿಂದ ತುಳಿದು ಸಾಯಿಸಿದ ಘಟನೆ ಎಚ್.ಡಿ.ಕೋಟೆಯ ಹೈರಿಗೆ-ಮಾದಾಪುರ ಸಮೀಪದಲ್ಲಿ ನಡೆದಿದೆ.
ರಾಯಚೂರಿನ ಕಕ್ಕೇರಿ ಮೂಲದ ಹನುಮಂತಪ್ಪ(50) ಮೃತ ದುರ್ದೈವಿ. ನಾಲೆ ಕೆಲಸಕ್ಕಾಗಿ ಮೈಸೂರಿಗೆ 8 ಮಂದಿ ಕೂಲಿ ಕಾರ್ಮಿಕರು ಬಂದಿದ್ದರು. ಅವರಲ್ಲಿ ಹನುಮಂತಪ್ಪ ಕೂಡ ಒಬ್ಬರು. ಬೇರೆ ಊರಿನಿಂದ ಜೀವನ ನಡೆಸಲು ಕೆಲಸಕ್ಕೆಂದು ಬಂದ ಹನುಮಂತಪ್ಪ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಇಂದು ಮುಂಜಾನೆ ಕಾರ್ಮಿಕರೆಲ್ಲ ನಾಲೆ ಕೆಲಸದಲ್ಲಿ ತೊಡಗಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿ ಕಾಲಿನಿಂದ ಕಾರ್ಮಿಕನನ್ನು ತುಳಿದಿದೆ. ಪರಿಣಾಮ ಸ್ಥಳದಲ್ಲೇ ಹನುಮಂತಪ್ಪ ಸಾವನ್ನಪ್ಪಿದ್ದಾರೆ.
ಶುಕ್ರವಾರ ರಾತ್ರಿ ಹೈರಿಗೆ-ಮಾದಾಪುರ ಸಮೀಪದ ಜಮೀನಿಗೆ ಕಾಡಾನೆಗಳು ನುಗ್ಗಿದ್ದವು. ಈ ವೇಳೆ ರೈತರು ಆನೆಯನ್ನ ಓಡಿಸಲು ಮುಂದಾಗಿದ್ದು, ಜಮೀನಿಂದ ನಾಲೆಯತ್ತ ಬಂದ ಕಾಡಾನೆ ಕಾರ್ಮಿಕನ ಮೇಲೆ ದಾಳಿ ಮಾಡಿ ಬಲಿ ಪಡೆದಿದೆ.
ಇದೀಗ ಮೃತ ವ್ಯಕ್ತಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.