ಬೆಳಗಾವಿ(ಚಿಕ್ಕೋಡಿ): ಜಿಲ್ಲೆಯ ಅಥಣಿ ತಾಲೂಕಿನ ಶೇಡಬಾಳ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಗುತ್ತಿಗೆದಾರನ ಎಡವಟ್ಟಿನಿಂದ ರಸ್ತೆ ಮಧ್ಯದಲ್ಲೇ ವಿದ್ಯುತ್ ಕಂಬವನ್ನು ಬಿಟ್ಟು ರಸ್ತೆ ನಿರ್ಮಾಣ ಮಾಡಲಾಗಿದೆ.
ಅಥಣಿ ತಾಲೂಕಿನ ಗುತ್ತಿಗೆದಾರ ರಫೀಕ್ ತಾರಡೆ ನಗರೋತ್ಥಾನ ಯೋಜನೆ ಅಡಿಯಲ್ಲಿ ಕೋಣನವಾಡಿಯಿಂದ ಕಲ್ಲಾಳ ಗ್ರಾಮದವರೆಗೆ ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ 1 ಕಿ.ಮೀ ರಸ್ತೆ ನಿರ್ಮಾಣ ಮಾಡಿದ್ದಾರೆ. ಈ ರಸ್ತೆಯಲ್ಲಿ ರಾತ್ರಿ ಪ್ರಯಾಣ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಯಾಕೆಂದರೆ ಈ ರಸ್ತೆ ಮಧ್ಯದಲ್ಲೇ ವಿದ್ಯುತ್ ಕಂಬವಿದ್ದರೂ ಅಲ್ಲೇ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ಎಡವಟ್ಟಿನಿಂದ ಗುತ್ತಿಗೆದಾರ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
Advertisement
Advertisement
ಶೇಡಬಾಳ ಪಟ್ಟಣ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯವೇ ಹೀಗೆ ರಸ್ತೆ ನಿರ್ಮಾಣ ಮಾಡಲು ಕಾರಣವಾಗಿದ್ದು, ದಾರಿ ಮಧ್ಯದಲ್ಲೇ ಕಂಬ ಇದ್ದರೂ ರಸ್ತೆ ನಿರ್ಮಾಣ ಮಾಡಲಾಗಿದೆ. ಆದ್ರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಕ್ರಮ ಕೈಗೊಳ್ಳದೆ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಂದಾಜು 40 ಲಕ್ಷ ಜನರ ದುಡ್ಡು ನೀರು ಪಾಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
Advertisement
Advertisement
ಅಲ್ಲದೆ ಈ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದ್ದಾಗಿದ್ದು, ನಿರ್ಮಾಣವಾಗಿರುವ ಡಾಂಬರ್ ರಸ್ತೆಯನ್ನು ಕೈಯಿಂದಲೇ ಕಿತ್ತಬಹುದಾಗಿದೆ. ಈ ರೀತಿ ನಿರ್ಲಕ್ಷ್ಯ ತೋರಿರುವ ಗುತ್ತಿಗೆದಾರ ಹಾಗೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿ, ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದ್ದಾರೆ.