– ಸರ್ಕಾರಿ ಯೋಜನೆಗೆ ಮಂಡ್ಯ ಜನರ ಕಿಡಿ
ಮಂಡ್ಯ: ವಿಶ್ವಪ್ರಸಿದ್ಧ ಕೆಆರ್‍ಎಸ್ ಅಣೆಕಟ್ಟೆಗೆ ಗಂಡಾಂತರ ಎದುರಾಗಿದೆ. ಡ್ಯಾಮ್ ಸಮೀಪವೇ ರಾಜ್ಯ ಸರ್ಕಾರ ಹೊಸ ಯೋಜನೆ ಕೈಗೆತ್ತಿಕೊಂಡಿರೋದೇ ಇದಕ್ಕೆ ಕಾರಣ. ಸರ್ಕಾರದ ಈ ನಿರ್ಧಾರದಿಂದ ರೈತರು ಮತ್ತು ಪ್ರಾಣಿ, ಪಕ್ಷಿ ಸಂಕುಲಕ್ಕೂ ಕಂಟಕ ಎದುರಾಗಿದೆ.
ಕೃಷ್ಣರಾಜಸಾಗರ ಅಣೆಕಟ್ಟೆ ಸಮೀಪದ ಎಡಮುರಿಯಲ್ಲಿ 0.5 ಮೆಗಾವ್ಯಾಟ್ ಕಿರು ವಿದ್ಯುತ್ ಉತ್ಪಾದನಾ ಯೋಜನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದಕ್ಕಾಗಿ ಬೆಂಗಳೂರಿನ ವಿ ಫ್ರಾಮ್ ಅನ್ನೋ ಖಾಸಗಿ ಕಂಪನಿ ಗುತ್ತಿಗೆ ಪಡೆದಿದೆ. ಹೀಗಾಗಿ ಗುತ್ತಿಗೆ ಪಡೆದ ಖಾಸಗಿ ಕಂಪನಿ ಬಂಡೆಗಳನ್ನ ಸ್ಫೋಟಿಸಲು ಡೈನಾಮೈಟ್ ಬಳಸ್ತಿದೆ. ಡೈನಾಮೈಟ್ ಬ್ಲಾಸ್ಟ್ ಆಗೋ ಜಾಗದಿಂದ ಕೆಲವೇ ದೂರಗಳಲ್ಲಿ ಕೆಆರ್‍ಎಸ್ ಡ್ಯಾಮ್ ಇದೆ. ಜೊತೆಗೆ ಪಕ್ಕದಲ್ಲೇ ಇರೋ ಸಿಡಿಎಸ್, ವಿರಿಜಾ, ದೇವರಾಯ ನಾಲೆಗಳಿಗೂ ಅಪಾಯ ಎದುರಾಗಿದೆ.
Advertisement
ಗುತ್ತಿಗೆ ಅವಧಿ 2015ಕ್ಕೆ ಮುಗಿದಿದ್ರೂ ಈಗ ಯೋಜನೆ ಪ್ರಾರಂಭಿಸಿದೆ. ಇನ್ನು ಡ್ಯಾಂನಿಂದ ನಾಲೆಗಳಿಗೆ ಹರಿಯುವ ನೀರಿನ ದಿಕ್ಕನ್ನೇ ಬದಲಾಯಿಸಿದೆ. ನೀರಿನ ಮಧ್ಯದಲ್ಲೇ ಬಂಡೆ ಹಾಕಿರೋ ಕಾರಣ ನಾಲೆಗೆ ನೀರು ಹರಿಯುತ್ತಿಲ್ಲ. ಅವೈಜ್ಞಾನಿಕ ಯೋಜನೆಯಿಂದಾಗಿ ಜಾನುವಾರುಗಳಿಗೆ ಕುಡಿಯಲು ನೀರು ಸಿಗದಂತಾಗಿದೆ. ಜೊತೆಗೆ ರೈತರು ತಮ್ಮ ಜಮೀನು, ತೋಟಗಳಿಗೆ ಹೋಗಲು ಕಷ್ಟಪಡ್ತಿದ್ದಾರೆ.
Advertisement
ಒಟ್ಟಾರೆ, ವಿದ್ಯುತ್ ಉತ್ಪಾದನೆಗೆಂದು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯೋಜನೆಯಿಂದ ಜನರಿಗೆ ಅನುಕೂಲವಾಗೋ ಬದಲು ಅನಾನುಕೂಲವಾಗ್ತಿದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.